February 28, 2012

ಹುಚ್ಚು ಹೊಳೆ ಬ್ಲಾಗೂ , ಬದರಿ -ಕೇದಾರವೂ !

ನನ್ನ ಬ್ಲಾಗ್ ಕೂಡ ಒಂಥರಾ ಬದರಿ -ಕೇದಾರ ಗಳ ಥರ ಆಗಿದೆ !

ಅಯ್ಯೋ ... ತಾನು  ಏನೋ ನಾಲ್ಕು ಬರಹಗಳನ್ನು ಬರೆದು ಬದಿಗಿಟ್ಟ ಲಡಕಾಸಿ ಬ್ಲಾಗಿಗೂ ಆ ಪವಿತ್ರ ಕ್ಷೇತ್ರಗಳಿಗೂ ಹೋಲಿಸ್ತಾ ಇದಾಳಲ್ಲ  ? ತಲೆ ಕೆಟ್ಟಿಲ್ಲ ತಾನೆ ಅಂತ  ಅಂದ್ಕೋಬೇಡಿ . ಹಾಗಲ್ಲ ನಾನು  ಹೇಳಿದ್ದು. ಹಿಮಾಲಯದ ಶಿಖರಗಳ ತುದಿಯಲ್ಲಿ ತಣ್ಣಗೆ ಕುಳಿತ  ಆ ಕ್ಷೇತ್ರಗಳು  ವರ್ಷದಲ್ಲಿ ಆರು ತಿಂಗಳು ಮಾತ್ರ ತೆರೆದಿರುತ್ತವೆ . ಒಮ್ಮೆ ಚಳಿಗಾಲ ಶುರು ಆಯ್ತಂದರೆ ಮುಂದಿನ ನಾಲ್ಕು ತಿಂಗಳು   ಹಿಮ ಸುರಿದು ದೇವಾಲಯಗಳು ಅಡಿ ದಪ್ಪದ ಹಿಮದಲ್ಲಿ ಹೂತುಹೋಗುತ್ತವೆ.  ಅಲ್ಲಿಗೆ ಹೋಗುವ ದಾರಿ ಮುಚ್ಚಿಯೇ ಬಿಟ್ಟಿರುತ್ತದೆ. ಮತ್ತೆ ಚಳಿ ಕಡಿಮೆ ಆಗಿ ಹಿಮ ಕರಗಲು ಮತ್ತೆರಡು ತಿಂಗಳು  ! ಭಕ್ತರು ಯಾರೂ ಹೋಗುವ ಪ್ರಶ್ನೆ ಯೇ ಇಲ್ಲ ! ಹಾಗಿದ್ದ ಮೇಲೆ  ದೇವರು ತಾನೊಬ್ಬನೇ ಅಲ್ಲಿ ಯಾಕೆ ಕುಳಿತಿರುತ್ತಾನೆ ಅಲ್ಲವೇ ? ದೇವರೂ ಕೂಡ ಗಂಟು ಮೂಟೆ ಕಟ್ಟಿಕೊಂಡು ಕೆಳಗಿಳಿದು  ತನಗೆಂದೇ ಮೀಸಲಿಟ್ಟ  ದೇವಸ್ಥಾನಗಳಲ್ಲಿ ಬೆಚ್ಚಗೆ ಕೂತು ಬಿಡ್ತಾನೆ .  ಹೀಗಾಗಿ ಆರು ತಿಂಗಳು ಬದರಿ- ಕೇದಾರದ ದೇವಸ್ಥಾನಗಳು  ಬಾಗಿಲು ಮುಚ್ಚಿಕೊಂಡಿರುತ್ತವೆ .  ಹಾಂ , ಇದೊಂದೇ ವಿಷಯಕ್ಕೆ ನಾನೂ ನನ್ನ ಬ್ಲಾಗನ್ನು ಹೋಲಿಸಿದ್ದು ! ಇತ್ತೀಚೆ ಬಾಗಿಲು ಮುಚ್ಚಿಕೊಂಡು  ನಾನೂ ಹಾಯಾಗಿ ಕೂತಿದೀನಿ ಅಂತ !

ಅದ್ಯಾಕೋ , ಬರೆಯೋ ಆಸಕ್ತಿ ನೇ ಕಳೆದು ಹೋಗಿದೆ ಅನ್ನೋ ತರ ! ಹೊಸ ವಿಷಯಗಳು ಹೊಳೆದು , ಹಾಂ , ಇದರ ಮೇಲೊಂದು ಬರಹ ಬರೀತೀನಿ  ಅಂದ್ಕೊಂಡು  ಶುರು ಮಾಡಿ  ಒಂದು ಪ್ಯಾರಾ ದಾಟುತ್ತಿದ್ದ ಹಾಗೆ .. ಮುಂದೆನೂ ಹೊಳೆಯೋದೆ ಇಲ್ಲ !  ಕೆಲವು ಸಲ  ಗಾಬರಿ ಆಗಿಬಿಡತ್ತೆ ! ನನ್ನ ಬರವಣಿಗೆಯ  ಸಾಮರ್ಥ್ಯ ಇಷ್ಟೇನಾ? ಮುಗಿದೇ ಹೋಯ್ತಾ ಅಂತ ! 
ನಮ್ಮನೆಯವರು ಹೇಳ್ತಾರೆ  " ಒಂಥರಾ  ಅಲೆಗಳ ಏರಿಳಿತ ಇದ್ದಂಗೆ ಕಣೆ  ! ಈಗ ಇಳಿತದ ಸಮಯ ಹಾಗಾಗಿ ನಿಂಗೆ  ಬರೆಯೋಕೆ ಆಗ್ತಿಲ್ವೇನೋ . ಸಲ್ಪ ದಿನಕ್ಕೆ ಸರಿ ಹೋಗತ್ತೆ ಬಿಡು "  ಅಂತ . ಆದರೆ  ಯಾಕೋ ಇಳಿತದ ಸಮಯವೇ  ಹೆಚ್ಚಾಗಿ ಬಿಟ್ಟಿದೆ ಅನಿಸ್ತಾ ಇದೆ !  ಹಾಗೆ ನೋಡಿದರೆ , ಬಹಳಷ್ಟು ಬ್ಲಾಗಗಳಲ್ಲಿ ಇದೆ ಕಥೆ ಅಂತ ಗಮನಿಸಿದೀನಿ . ಅದು  ಸ್ವಲ್ಪ ಸಮಾಧಾನ . ಮನುಷ್ಯನ ಸ್ವಭಾವ ನೋಡಿ ! ನಮ್ಮ ಮನೆಲಿ ಕರೆಂಟ್ ಹೋಯ್ತು ಅಂದ್ರೆ  ಮೊದಲು ಕಿಡಕಿಯ ಆಚೆ  ಇಣುಕಿ ನೋಡ್ತೀವಿ . ಪಕ್ಕದ  ಮನೇಲೂ  ಇಲ್ಲ ಅಂದ್ರೆ ಮಾತ್ರ ಕೊಂಚ ಸಮಾಧಾನ !! ಹಾಗೆ ಇದೂ .

ಹ್ಮ್ಮ್ 
ಎಲ್ಲಿ ನೋಡಿದರೂ ಧೂಳು , ಮೂಲೆ ಮೂಲೆಯಲ್ಲಿ ಕಟ್ಟಿದ ಬಲೆ  ಛೆ ! ಇದನ್ನೆಲ್ಲಾ ಚೊಕ್ಕಗೊಳಿಸಲು ತುಂಬಾ ದಿನ ಬೇಕು. ಅಷ್ಟೆಲ್ಲ ಟೈಮ್ ಇಲ್ಲ . ಸ್ವಲ್ಪ  ಗುಡಿಸಿ  ನೆಲ ತೊಳೆದು ಬಣ್ಣದ ರಂಗೋಲಿ ಹಾಕೋಣ ಅಂದ್ರೆ  ಅಷ್ಟು ಸುಲಭ ಅನಿಸ್ತಾ ಇಲ್ಲ. ಗುಡಿಸೋಕೆ ಪೊರಕೆ ಕಾಣ್ತಿಲ್ಲ. ಬೇಸಿಗೆ ಬಂತಲ್ವಾ? ನಲ್ಲಿ ಲಿ ನೀರು ಬರ್ತಿಲ್ಲ ಇನ್ನು ತೊಳೆಯೋದು ಹೇಗೆ ?  ಬಣ್ಣಗಳೆಲ್ಲ ಕಲಸಿ ವಿಚಿತ್ರವಾಗಿವೆ.  ರಂಗೋಲಿಗೆ ತುಂಬಲು ಬಣ್ಣ ವೆ ಇಲ್ಲ . ಆದರೂ ಇವತ್ತು ಅಲ್ಪ ಸಲ್ಪವಾದರೂ ಸ್ವಚ್ಚಗೊಳಿಸಿ  ಒಂದು ಪುಟ್ಟ ರಂಗೋಲಿಯನ್ನು ಹಾಕೋಣ ಅಂದ್ಕೊಂಡಿದೀನಿ. ಬರೀ ಬಿಳಿಯ ರಂಗೋಲಿ ಪುಡಿ ಇದ್ದರೂ ಸಾಕು ಬಿಡಿ. ಯಾರಾದ್ರು ಬಂದು  ಇಣುಕಿದಾಗ ಒಂಚೂರಾದರೂ ನೋಡೋ  ಹಾಗೆ ಇಲ್ಲದಿದ್ರೆ ಏನು ಚೆನ್ನ ? ಎಂದೂ ಇಲ್ಲದ್ದು  ಇವತ್ತು ಯಾಕೆ ಇಷ್ಟೆಲ್ಲಾ ಧಾವಂತ / ಆಸಕ್ತಿ ಅಂತೀರಾ ?  ಹ್ಞೂ , ಯಾಕೆಂದ್ರೆ ಹುಟ್ಟು ಹಬ್ಬ  ನೋಡಿ ! ಈ ದಿನ ಆದ್ರೂ ಸ್ವಲ್ಪ ಚಂದ ಕಾಣಿಸ ಬೇಕಲ್ವಾ? 

December 4, 2011

ಟೇಪ್ ರೆಕಾರ್ಡರ್


ತುಂಬಾ ದಿನಗಳಾಯ್ತು ಬರೀದೆ . ಹಳೆಯದನ್ನೆಲ್ಲ ಒಮ್ಮೆ ಓದುವಾಗ  ಒಮ್ಮೆಲೇ ,  ರೇಡಿಯೋ , ಟಿವಿ ಬಗ್ಗೆ ಬರೆದಿದ್ದೆ . ಮತ್ತೆ ಟೇಪ್ ರೆಕಾರ್ಡರ್  ಬಿಟ್ಟೇ ಬಿಟ್ನಲ್ಲ   ಅಂತ ನೆನಪಾಯ್ತು . 
ರೇಡಿಯೋ  ಮತ್ತು ಟಿವಿ ಗಳ ನಡುವಿನ  ಕಾಲವನ್ನು ಆಳಿದ್ದು  ಈ ಟೇಪ್ ರೆಕಾರ್ಡರ್ ಎಂಬ  ವಸ್ತು ! ನಾವು ಮಾತಾಡಿದ್ದನ್ನು ಮತ್ತೆ ಅದರಿಂದ ಕೇಳಬಹುದು ಎಂಬ ಕಲ್ಪನೆಯೇ  ಒಂಥರಾ " ಥ್ರಿಲ್ಲಿಂಗ್ !!" 
ಮೊದಲ ಬಾರಿಗೆ  ನಾನೂ ಟೇಪ್ ರೆಕಾರ್ಡರ್  ನೋಡಿದ್ದು ಬಹುಶಃ ನಾನೂ  ೭ ನೆ ಕ್ಲಾಸ್ ನಲ್ಲಿದ್ದಾಗ . ಅಪ್ಪಾಜಿಯ ಸಹೋದ್ಯೋಗಿಯೊಬ್ಬರ ಮನೆಗೆ  ಹೊಸದಾಗಿ ಬಂದ  ಆಕರ್ಷಣೆ ಅದು .  " ನ್ಯಾಷನಲ್ "   ಎಂಬ ಬ್ರಾಂಡ್ ಎಂದು ನೆನಪು .  ಮಲಗಿಸಿ ಇಡಬೇಕಾಗುತ್ತಿದ್ದ ಮಾಡೆಲ್ .  
"ರಾಮಣ್ಣ ನ ಮನೇಲಿ ಎಂತದೋ  ಹೊಸ ನಮನಿ ರೇಡಿಯೋನಡ , ನಮಗೆ ಬೇಕಾದ ಹಾಡಷ್ಟೇ ಬೇಕಾದರೂ ಹಾಕಿ ಕೇಳಲೇ ಬತ್ತಡ "   ಎಂಬ ಸುದ್ದಿ ಎಲ್ಲಾ ಕಡೆಗೆ. 
ಚೌತಿ ಹಬ್ಬದ ಹೊತ್ತಿಗೆ ಅವರ ಮನೆಗೆ ಗಣಪತಿ ನೋಡಲು ಹೋದವರೆಲ್ಲ  ಗಣಪತಿಯ ಕಡೆ  ಲಕ್ಷ್ಯ ಕೊಡದೆ .. ಈ ಟೇಪ್ ರೆಕಾರ್ಡರ್ ಅನ್ನು ಅರಸುತ್ತಿದ್ದರು . ಅದು ನೋಡಲು ಹೇಗಿರುತ್ತದೆ ಎಂದು ಗೊತ್ತಿರದ ಮಕ್ಕಳಂತೂ   ಗೋಡೆಯ ಮೇಲೆ,  ಗಣಪತಿಯ ಪೀಠದಲ್ಲಿ  ಹೀಗೆ ತಮಗೆ  ತಿಳಿದಂತೆ ಅರಸುತ್ತಿದ್ದರು . 
ನಾವು ಅಪ್ಪಾಜಿಯ ಜೊತೆಗೆ ಹೋಗಿದ್ದರಿಂದ   ರಾಮಣ್ಣ   ನಮ್ಮನ್ನು ಒಳಗೆ ಕರೆದು ಪ್ರಸಾದ  ಕೊಟ್ಟರು. ಹಾಗೇ, ಹೊಸ ಟೇಪ್ ರೆಕಾರ್ಡರ್ ಅನ್ನು ತೋರಿಸಿದರು .  ಸುಮಾರು ೧೦ ಇಂಚು ಉದ್ದ, ೬ ಇಂಚು ಅಗಲದ ಬಾಕ್ಸ್ ಗೆ ೫-೬ ಚೌಕ ಬಟ್ಟನ್ ಗಳು . ಒತ್ತಿದರೆ ಹಾಡುವ , ಒತ್ತಿದರೆ ನಿಲ್ಲುವ , ಹಿಂದೊಡಿಸಿ , ಮುಂದೊಡಿಸಿ ಕೇಳಬಹುದಾದ ಕಲ್ಪನೆಯೇ ನಮಗೆ  ಪುಳಕ ತರುತ್ತಿತ್ತು . ಮರುದಿನ ಶಾಲೆಯಲ್ಲಿ  ಈ ಹೊಸ ವಸ್ತುವನ್ನು ನೋಡಿದ ಬಗ್ಗೆ ಹೆಮ್ಮೆಯಿಂದ  ಹೇಳಿಕೊಳ್ಳುತ್ತಿರುವಾಗ ,  ರೇಡಿಯೋದ ಬಗ್ಗೆ ತಕ್ಕ ಮಟ್ಟಿನ ಜ್ಞಾನವಿದ್ದವನೊಬ್ಬ   ಈ ಟೇಪ್ ರೆಕಾರ್ಡರ್ ನಲ್ಲಿ ಯಾವ ಯಾವ  ಸ್ಟೇಶನ್ ಬರುತ್ತದೆ ? ಸಿಲೋನ್ ಮತ್ತು ವಿವಿಧ ಭಾರತಿ ಸರಿಯಾಗಿ ಕೇಳುತ್ತದಾ? ಎಂದು ಪ್ರಶ್ನಿಸುವುದೇ?  ಜಂಭ ಕೊಚ್ಚಿಕೊಳ್ಳುತ್ತಿದ್ದ ನಾವು ತಬ್ಬಿಬ್ಬಾದೆವು. ನೋಡಿದ ಉತ್ಸಾಹದಲ್ಲಿ  ಇಂಥಾ ಮುಖ್ಯವಾದ ವಿಷಯವನ್ನು ಕೇಳಲು ಮರೆತೆವಲ್ಲ ಅಂದು ಹಳ ಹಳಿಸಿದೆವು ! ಹಾಗಿದ್ದರೂ , ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ  " ಅಯ್ಯೋ ಅದೆಲ್ಲ  ಕೇಳೋ ಹೊತ್ತಿಗೆ ಅವರ ಮನೆಗೆ ಯಾರೋ ಬಂದರು . ಇನ್ನೊಂದು ದಿನ  ಪುರಸೋತ್ತಲ್ಲಿ  ಹೋಗಿ  ಎಲ್ಲಾ ತಿಳಿದು ಬರುತ್ತೇವೆ  " ಎಂದು ಸಮಜ್ಹಾಯಿಸಿದ್ದೂ ಆಯಿತು .

ಆ ದಿನ ಮನೆಗೆ ಬಂದ ಮೇಲೆ , ಅಪ್ಪಾಜಿಯ ಮುಂದೆ ಈ ಪ್ರಶ್ನೆ ಇಟ್ಟೆವು . ಅವರು ನಕ್ಕು  ನಮಗೆ , ಟೇಪ್ ರೆಕಾರ್ಡರ್  ಹೇಗೆ ಕೆಲಸ ಮಾಡುತ್ತದೆ ಎಂದು ವಿವರಿಸಿದರು.
ಏನು ಕೇಳ ಬೇಕಾಗಿದೆಯೋ ಅದನ್ನು ಮೊದಲು ' ಕ್ಯಾಸೆಟ್ 'ನಲ್ಲಿ ರೆಕಾರ್ಡ್ ಮಾಡಿ  ಇಟ್ಟಿರಬೇಕು .ಆ ಕ್ಯಾಸೆಟ್ ಹಾಕಿದಾಗ  ಅದರಲ್ಲೇನು ಟೇಪ್ ಮಾಡಲಾಗಿದೆಯೋ ಅದು ಮಾತ್ರ  ಕೇಳುತ್ತದೆ  ಎಂದು ಅರ್ಥವಾಯಿತು . ನಾವು ಮಾತಾಡಿದ್ದನ್ನು ಹಾಗೆ ರೆಕಾರ್ಡ್ ಮಾಡಿ ಕೇಳಬಹುದು ಎಂಬ ಕಲ್ಪನೆ ಪುಳಕ ತಂದರೆ , ಬರೀ ಅದಷ್ಟನ್ನೇ  ಕೇಳಬೇಕಲ್ಲ , ರೇಡಿಯೋದ ಹಾಗೆ ವೈವಿಧ್ಯವಿಲ್ಲ ಎಂಬ  ನಿರಾಸೆಯೂ ಆಗುತ್ತಿತ್ತು. 

ಹೀಗಿದ್ದರೂ , ಟೇಪ್ ರೆಕಾರ್ಡರ್  ತುಂಬಾ ಕುತೂಹಲದ ವಸ್ತುವಾಗಿತ್ತು. ಆ ವರ್ಷ ನಮ್ಮ  ಹೈಸ್ಕೂಲ್ ನ  ವಾರ್ಷಿಕೋತ್ಸವದಲ್ಲಿ , ಡ್ಯಾನ್ಸ್  ಮಾಡುವವರಿಗೆ  ಹಿನ್ನೆಲೆ ಗಾಯಕರು ಬೇಕಾಗಲಿಲ್ಲ. ರಾಮಣ್ಣ ನ ಹೊಸಾ ಟೇಪ್ ರೆಕಾರ್ಡರ್ ನಲ್ಲಿ ಮೊದಲೇ  ಹಾಡುಗಳನ್ನು  ಟೇಪಿಸಿಕೊಂಡು  ಆ ದಿನ  ಮೈಕ್ ಮುಂದೆ  ಟೇಪ್ ರೆಕಾರ್ಡರ್ ಆನ್ ಮಾಡಿದಾಗ  ಡ್ಯಾನ್ಸ್ ಮಾಡುವವರಿಗೂ ಏನೋ ಸಂಭ್ರಮ !!!! 

ಮರುವರ್ಷ ನಮ್ಮನೇಲೂ ಟೇಪ್ ರೆಕಾರ್ಡರ್ ಬಂದಾಗ ನಮ್ಮನ್ನು ಹಿಡಿಯುವವರೇ ಇರಲಿಲ್ಲ ! ಅಲ್ಲದೆ , ನಮ್ಮ ಮನೆಯಲ್ಲಿ ಇನ್ನೂ ಹೊಸಾ ಮಾಡೆಲ್ ಬಂದಿತ್ತು . ಟ್ರಾನ್ಸಿಸ್ಟರ್ ರೇಡಿಯೋದಂತೆಯೇ ಕಾಣುವ " ಪ್ಯಾನಸೋನಿಕ್ "   ಸುಂದರವಾಗಿ ಅಪ್ಪಾಜಿಯ ಟೇಬಲ್ ಮೇಲೆ ಕುಳಿತಿತ್ತು . ನಾವು ಮಕ್ಕಳಿಗೆ ಅದನ್ನು ಮುಟ್ಟುವ ಸ್ವಾತಂತ್ರ್ಯವಿರಲಿಲ್ಲ . ಮನೆಯಲ್ಲಿ ಇದ್ದಿದ್ದು  ೨-೩ ಕ್ಯಾಸೆಟ್  ಮಾತ್ರ. ಭಜನ್  ಮತ್ತು ಹಿಂದುಸ್ತಾನೀ ಶಾಸ್ತ್ರೀಯ ಸಂಗೀತದ್ದು. ನಮಗೋ ನಮ್ಮ ಮೆಚ್ಚಿನ ಹಾಡುಗಳನ್ನು ಬೇಕು ಬೇಕಾದಾಗೆಲ್ಲ  ಕೇಳುವ  ಆಸೆಯಿತ್ತು ಆದರೆ ಅಪ್ಪಾಜಿಯ ಮುಂದೆ ಯಾರೂ ಬಾಯಿ ಬಿಡುತ್ತಿರಲಿಲ್ಲ. ಈಗಿನಂತೆ ಗೂಡಂಗಡಿಗಳಲ್ಲೂ   ಕ್ಯಾಸೆಟ್ , ಸಿಡಿ  ಸಿಗುವ ಕಾಲವಾಗಿರಲಿಲ್ಲ . ಸಾಗರ ಪೇಟೆಗೆಲ್ಲ   ಇದ್ದಿದ್ದು ೨-೩ ಕ್ಯಾಸೆಟ್ ಅಂಗಡಿಗಳು ಮಾತ್ರ. ಅವರಲ್ಲಿಯೂ  ರೆಡಿ ಕ್ಯಾಸೆಟ್ ಗಳು ಕಮ್ಮಿ. ನಾವು ಆರಿಸಿ ಕೊಟ್ಟ ಹಾಡುಗಳನ್ನು ಬರೆದುಕೊಂಡು , ನಂತರ ೧೦-೨೦ ದಿನಗಳ  ನಂತರ , ಅಷ್ಟೆ ಸಲ ನೆನಪು ಮಾಡಿದ ಮೇಲೆ ಅಂತೂ  ಒಂದು ಕ್ಯಾಸೆಟ್  ಸಿಗುತ್ತಿತ್ತು . ಸೋನಿ  ಕ್ಯಾಸೆಟ್ ಆದರೆ  ಸುಮಾರು ೪೦ -೪೫ ರೂಪಾಯಿ ಆಗುತ್ತಿತ್ತು .  ಅಂದಿನ ದಿನಗಳ ಮಟ್ಟಿಗೆ ಅದು ಸಾಕಷ್ಟು ದೊಡ್ಡ ಮೊತ್ತವೇ . ಅಂದರೂ ನಾವು ಏನೆಲ್ಲಾ ಸರ್ಕಸ್ ಮಾಡಿ ಅಪ್ಪಜಿಯಿಂದ ಒಂದು ಹಳೆಯ ಕ್ಯಾಸೆಟ್ ಅನ್ನು ನಮಗಾಗಿ ಪಡೆದೆವು. 

ಒಂದು ಸಲ  ಏನಾಯ್ತು ಅಂದ್ರೆ , ಅಪ್ಪಾಜಿ -ಅಮ್ಮ ಇಬ್ಬರೂ ಯಾವ್ದೋ  ಕಾರ್ಯಕ್ರಮಕ್ಕೆ ಹೋಗಿದ್ದರು . ರಾತ್ರಿ ಕೊನೆ ಬಸ್ಸಿಗೆ ಬರುವವರಿದ್ದರು. ಆ ದಿನ ನಾವು ಫುಲ್ ಖುಷ್ !  ಅವರು ಬರೋದ್ರೊಳಗೆ  ನಮ್ಮ ಕ್ಯಾಸೆಟ್ ನಲ್ಲಿ ಏನಾದರೂ ಟೇಪ್ ಮಾಡಲೇ ಬೇಕೂಂತ ನಿರ್ಧಾರ ಮಾಡಿದ್ವಿ.  ನಾನು ಮತ್ತು ಇಬ್ಬರು ತಮ್ಮಂದಿರು   ಜೊತೆಗೆ ಅಕ್ಕ ಪಕ್ಕದ ಇನ್ನಿಬ್ಬರು ಹುಡುಗರು ಸೇರಿಕೊಂಡೆವು . ಟೇಪ್ ರೆಕಾರ್ಡ್  ಆನ್ ಮಾಡಿ ,ಕ್ಯಾಸೆಟ್ ಒಳಗೆ ಹಾಕುವಾಗ ಎದೆಯೊಳಗೆ ಡವ ಡವ . ಕ್ಯಾಸೆಟ್  ಹೇಗೆ ಹಾಕುವುದೂ ಎಂದೂ ಸರಿಯಾಗಿ ಗೊತ್ತಿರಲಿಲ್ಲ ನಮಗೆ . ಒಂದೆರಡು ಬಾರಿ ಹಾಕಿ ತೆಗೆದು ಮಾಡಿ , ಅಂತೂ ಅದು ಸರಿಯಾಗಿ ಜಾಗದಲ್ಲಿ ಕುಳಿತು ಕೊಂಡಿತು. ಸರಿ , ಮುಂದೇನು ಎಂಬ ಪ್ರಶ್ನೆ .  ನಾವು ಹಾಡು ಕೇಳುವುದು ಯಾವಾಗಲೂ ಇದ್ದೇ ಇದೆ , ಹೀಗಾಗಿ , ಇವತ್ತು ರೆಕಾರ್ಡ್ ಮಾಡುವುದು ಎಂದಾಯ್ತು . ಅದೂ ಸರಿ , ಏನನ್ನು ರೆಕಾರ್ಡ್ ಮಾಡುವುದು? 
ಆಗ " ಬಂಧನ " ಸಿನೆಮಾ  ರಿಲೀಸ್  ಆದ ಹೊಸದು. ಅದರ ಹಾಡುಗಳು ಬಹಳ ಜನಪ್ರಿಯವಾಗಿದ್ದವು. ಸರಿ ಅದನ್ನೇ ಹಾಡುವುದು ಎಂದಾಯಿತು . ಆಮೇಲೇನು ? ೨ ಹಾಡುಗಳು ಮುಗಿಯುವಷ್ಟರಲ್ಲಿ  ಕ್ಯಾಸೆಟ್ಟೆ ಮುಗೀತು !  ಅದು ಹ್ಯಾಗೆ ಅಂತೀರಾ? ಒಬ್ಬರಾದ ಮೇಲೊಬ್ಬರೂ   ೫ ಜನ ಒಂದೇ ಹಾಡನ್ನೇ  ಹಾಡುತ್ತಾ ಹೋದರೆ  ಇನ್ನೇನಾಗತ್ತೆ  ? ಪರಿಣಾಮವಾಗಿ ಇಡೀ ಕ್ಯಾಸೆಟ್ ನಲ್ಲಿ  " ನೂರೊಂದು ನೆನಪು ...  , ಪ್ರೇಮದಾ ಕಾದಂಬರಿ .. " ಬಿಟ್ಟರೆ ಬೇರೇನೂ ಇರಲೇ ಇಲ್ಲ !!!  ೫ ವಿಭಿನ್ನ ಸ್ವರಗಳಲ್ಲಿ  !!  ಜೊತೆಗೆ ಟೇಬಲ್ ಕುಟ್ಟುವ ,  ಪ್ಲೇಟ್ ತಟ್ಟುವ ಮ್ಯೂಸಿಕ್  ಬೇರೆ ! 
ಅಂತೂ ರೆಕಾರ್ಡಿಂಗ್  ಮುಗಿದಾಗ  ನಮಗೆ ಏನೋ ಸಾಧಿಸಿದ ಹೆಮ್ಮೆ . ಪುನಃ  ಪುನಃ ಹಾಕಿ ಕೇಳಿದ್ದೆ ಕೇಳಿದ್ದು.  ಒಬ್ಬರಿಗೊಬ್ಬರು ಶಾಭಾಸ್  ಕೊಟ್ಟಿದ್ದೇನು , ಎಲ್ಲೆಲ್ಲಿ ತಿದ್ದಬೇಕಾಗಿತ್ತು ಅಂತ ಸಲಹೆಗಳೇನು .. ...
ಸಂಜೆ  ಸಾಗರದಿಂದ ಹಿಂತಿರುಗಿದ ಅಪ್ಪಾಜಿ , ನಮ್ಮ ಸಾಹಸ ನೋಡಿ  ( ಕೇಳಿ ? ) ದಂಗಾದರು .  ಅಷ್ಟು ದುಬಾರಿಯ ಕ್ಯಾಸೆಟ್ ಅನ್ನು ಈ ರೀತಿ  ಹಾಳು ಮಾಡಿದ್ದಕ್ಕಾಗಿ  ನಮ್ಮನ್ನು ತರಾಟೆಗೆ  ತೆಗೆದುಕೊಂಡರು ! ಅದಾದ ಕೆಲ ತಿಂಗಳುಗಳ ವರೆಗೆ ನಮಗೆ  ಟೇಪ್ ರೆಕಾರ್ಡರ್ ಬಳಿ  ಸುಳಿಯುವ ಹಾಗೂ  ಇರಲಿಲ್ಲ !    

ಕ್ರಮೇಣ  ಟೇಪ್ ರೆಕಾರ್ಡರ್  ತಂತ್ರ ಜ್ಞಾನ ದಲ್ಲೂ ಬಹಳಷ್ಟು  ಹೊಸ ಆವಿಷ್ಕಾರ ಗಳಾದವು. ಅದರಲ್ಲಿ ಒಂದು  " ವಾಕ್ ಮನ್   " . ಪುಟ್ಟದಾದ, ಕೈಯಲ್ಲಿ ಸುಲಭವಾಗಿ  ತೆಗೆದುಕೊಂಡು ತಿರುಗಬಹುದಾದ  ಇದು ತುಂಬಾ ಜನಪ್ರಿಯವಾಗಿತ್ತು ! ಜೊತೆಗೆ, ವಯರ್ ಕಿವಿಗೆ ಸಿಕ್ಕಿಸಿಕೊಂಡು  ನಾವೊಬ್ಬರೇ ಹಾಡು ಕೇಳಬಹುದಾದ  ಮಜಾ ಬೇರೆ  !! 

ವಾಕ್ ಮನ್  ಎಂದಾಗ ನನ್ನ ಸಹೋದ್ಯೋಗಿಯೊಬ್ಬರು ಹೇಳಿದ ಘಟನೆ ನೆನಪಾಗುತ್ತದೆ .

ಅವರು ಸಂಬಂಧಿಯೊಬ್ಬರ ಮನೆಗೆ ಹೋಗಿದ್ದರಂತೆ. ಜೊತೆಯಲ್ಲಿ ಇನ್ನೊಬ್ಬ ಸೋದರ ಸಂಬಂಧಿಯೂ ಇದ್ದರಂತೆ . ಆತ    ತನ್ನ ಹೊಸಾ      " ವಾಕ್ ಮನ್   " .  ಹಿಡಿದುಕೊಂಡು ಹೋಗಿದ್ದನಂತೆ . ಅಲ್ಲಿ ಇದ್ದ ಹಿರಿಯ ಹೆಂಗಸೋಬ್ಬರೊಡನೆ ಮಾತಾಡುತ್ತ  ಗೊತ್ತಿಲ್ಲದಂತೆ  ಇವರು ರೆಕಾರ್ಡ್ ಮಾಡ್ತಾ ಇದ್ದರಂತೆ . ಚಿಕ್ಕ ವಯಸ್ಸಿನಲ್ಲೇ ಪತಿಯನ್ನು ಕಳೆದುಕೊಂಡು ತವರಿಗೆ ಬಂದು ಈಗ ತಮ್ಮನ ಮಗನ ಜೊತೆಯಲ್ಲಿ  ಇರುತ್ತಿದ್ದ ಆಕೆ , ಇವರೊಡನೆ ತನ್ನ ಸುಖ ದುಃಖ ತೋಡಿ ಕೊಳ್ತಾ ಇದ್ರಂತೆ .  " ನಮ್ಮ  ರಾಗೂ  ಚೋಲೋವ್ನೆಪಾ . ಅವನ ಹೆಂಡತಿ ನೇ ಸ್ವಲ್ಪ  ಒಂಥರಾ. ಎನ್ನುತ್ತಾ  ಬಹಳ ಹೊತ್ತು ಆಕೆಯ ಬಗ್ಗೆ  ತಮ್ಮ ಬೇಸರವನ್ನು ಹೇಳಿಕೊಂಡರಂತೆ  . ಅದನ್ನೆಲ್ಲಾ   ರೆಕಾರ್ಡ್ ಮಾಡಿಕೊಂಡಿದ್ದ ಇವರುಗಳು   ಸ್ವಲ್ಪ ಹೊತ್ತು ಬಿಟ್ಟು  ಅದನ್ನು ಪ್ಲೇ ಮಾಡಿದರಂತೆ . ತನ್ನದೇ ದನಿ ಕೇಳುತ್ತಲೇ , ಬೆಚ್ಚಿ ಬಿದ್ದ ಆಕೆ ,  "ಏನೋ ಇದು ? ಈ ಪೆಟ್ಗೆ ಲಿ ಯಾರಿದಾರೋ ? ನಾ ಹೇಳಿದನ ನಂದೇ ದನೀಲಿ ಯಾರೋ ಅಂತಾ ಇದಾರಲ್ಲೋ ? ಅಯ್ಯೋ , ನಂ ರಾಗೂ  ಕೇಳಿದ್ರೆ ಏನಂದ್ಕೊತಾನೋ ... ಏ , ಅವನಿಗೇ  ಕೇಳದೆ ಇರೋ ತರ   ಮಾಡೋ . .... ಎಂದೆಲ್ಲ ಅಲವತ್ತು ಕೊಂಡರಂತೆ .

ನನ್ನ ಅಪ್ಪಾಜಿ ಕೂಡ  ಕೆಲವು ಹಿರಿಯರ  ( ಅಪ್ಪಾಜಿಯ ತಾಯಿ , ಸೋದರ ಮಾವ , ಭಾವ , ಅಮ್ಮನ ಅಪ್ಪ-ಅಮ್ಮ  ಇತ್ಯಾದಿ) ದನಿಯನ್ನು   ಸಂದರ್ಶನ ರೂಪದಲ್ಲಿ ಧ್ವನಿಮುದ್ರಿಸಿ ಇಟ್ಟುಕೊಂಡಿದ್ದಾರೆ . ಆ ಹಿರಿಯರು ಬಹಳ ಮಂದಿ ಈಗ ನಮ್ಮೊಡನೆ ಇಲ್ಲದಿದ್ದರೂ ಅವರ ಧ್ವನಿಯನ್ನು ಕೇಳುವ ಅವಕಾಶ ನಮಗಿದೆ ! 

ಈಗ ವಾಕ್  ಮನ್ ಕೂಡ  ಕಾಣುವುದಿಲ್ಲ .. ಇನ್ನೂ ಪುಟ್ಟದಾದ , ಆದರೆ ಸಾವಿರ ಗಟ್ಟಲೆ  ಹಾಡುಗಳನ್ನು ತುಂಬಿಸಿಟ್ಟು ಕೊಳ್ಳಬಲ್ಲ  ಐ ಪಾಡ್  ಗಳು ಬಂದಿವೆ . ಕೆಲವೇ ಸೆಂಟಿ ಮೀಟರ್ ಗಾತ್ರದ  ಇವು ಗಳಲ್ಲಿ  ಬಹಳಷ್ಟು  ಹಾಡುಗಳನ್ನು  ತುಂಬಾ ಬಹುದಾದರೂ  ರೆಕಾರ್ಡ್ ಮಾಡುವುದು ಸಾಧ್ಯವಿಲ್ಲ . ತಂತ್ರಜ್ಞಾನ ಬೆಳೆದಂತೆ  ಗಾತ್ರದಲ್ಲಿ ಚಿಕ್ಕದಾಗುತ್ತಾ, ಆದರೆ  ಇನ್ನೂ ಸಾಕಷ್ಟು ಹೆಚ್ಚು ಹಾಡುಗಳನ್ನೂ ತುಂಬಿಸಿಟ್ಟುಕೊಳ್ಳುವ  ಮೆಮೊರಿ ಕಾರ್ಡ್ ಗಳು  ಬಂದಿವೆ. ಇವುಗಳನ್ನು ಹಾಕಿ ಮೊಬೈಲ್ ಅನ್ನೇ  ಹಾಡು ಕೇಳಲು ಬಳಸ ಬಹುದಾಗಿದೆ ! ಇವೆಲ್ಲ ಏನೇ  ಬಂದರೂ ,  ಮೊದಲ ಟೇಪ್ ರೆಕಾರ್ಡರ್ ತಂದ ಎಕ್ಸೈಟ್ ಮೆಂಟ್  ,ಕೌತುಕ, ಕುತೂಹಲ  ಇನ್ನೂ ಮರೆಯಲಾಗದು ! 

August 27, 2011

ಮನಸೆಳೆದ ಮಲೇಶಿಯಾ -೫ , ಲಂಕಾವಿಯಲ್ಲಿ ಕೊನೆಯ ದಿನ



  ಹೋಟೆಲ್ ಗೆ ಹೋಗಿ ಬಿಸಿ ಬಿಸಿಯಾಗಿ ಟೀ ಮಾಡಿಕೊಂಡು ಕುಡಿದೆವು. ಅರ್ಧ ಗಂಟೆ ವಿಶ್ರಾಂತಿ ತೆಗೆದು ಕೊಂಡು  ಮತ್ತೆ  ಅಲ್ಲಿಯೇ ಸುತ್ತಾಡಲು ಹೊರಟೆವು.  ಇದು ಲಂಕಾವಿಯಲ್ಲಿ ನಮ್ಮ ಕೊನೆಯ ದಿನವಾಗಿದ್ದರಿಂದ  ಅಕ್ಕ ಪಕ್ಕದ ಗಲ್ಲಿ ಶಾಪಿಂಗ್  ನೋಡೋಣ ಎಂದುಕೊಂಡು ಹೊರಬಿದ್ದೆವು . 

ಹಿಂದಿನ ದಿನ ನಾವು ನೋಡಿದ್ದ ರಸ್ತೆಯ ರೂಪವೇ ಇಂದು ಬದಲಾಗಿಬಿಟ್ಟಿತ್ತು . ಅಗಲವಾಗಿದ್ದ ರಸ್ತೆಯಲ್ಲಿ  ವಾಹನ ಸಂಚಾರವನ್ನು ನಿಷೇಧಿಸಲಾಗಿತ್ತು.  ರಸ್ತೆಯುದ್ದಕ್ಕೂ ಎರಡೂ ಕಡೆ ಚಿಕ್ಕ ಚಿಕ್ಕ ಅಂಗಡಿಗಳ ಸಾಲು ! ಝಾಗಮಗಿಸುವ   ವಿದ್ಯುದ್ದೀಪಗಳು , ದೊಡ್ಡದಾಗಿ ಒದರಿಕೊಳ್ಳುತ್ತಿದ್ದ  ಲೌಡ್ ಸ್ಪೀಕರ್ , ಸಡಗರದಿಂದ ಓಡಾಡುವ ಜನಜಂಗುಳಿ ಕಂಡು .. ನಮಗೆ ನಾವು ನಿನ್ನೆ ಬಂದಿದ್ದು ಇದೇ ರಸ್ತೆ ನಾ  ಎಂದು ಆಶ್ಚರ್ಯವಾಯ್ತು  . ಊರಲ್ಲಿಯ ಜಾತ್ರೆ ಪೇಟೆಯ ನೆನಪಾಯಿತು .   ಅಲ್ಲಿದ್ದ ಒಬ್ಬ ಅಂಗಡಿಯವನಲ್ಲಿ  ಇದೇನು ಎಂದು ವಿಚಾರಿಸಿದೆವು. ಆತ ಅಂದು " ಮಿಡ್ ನೈಟ್ ಮಾರ್ಕೆಟ್ ಡೇ  " ಎಂದೂ ವಾರಕ್ಕೊಮ್ಮೆ ಇದೇ ರೀತಿ ಒಂದೊಂದು ಬೀದಿಯಲ್ಲಿ ಹೀಗೇ ಮಧ್ಯರಾತ್ರಿಯವರೆಗೂ  ಮಾರ್ಕೆಟ್  ಇರುತ್ತದೆ ಎಂದೂ ಹೇಳಿದ. ಬಣ್ಣ ಬಣ್ಣದ ತರಾವರಿ ವಸ್ತುಗಳಿಂದ ಕಂಗೊಳಿಸುತ್ತಿದ್ದ  ಪುಟ್ಟ ಪುಟ್ಟ ಅಂಗಡಿಗಳು  ಜನರಿಂದ ತುಂಬಿದ್ದವು . ಹೇರ್ ಕ್ಲಿಪ್, ಚಪ್ಪಲಿಗಳಿಂದ ಹಿಡಿದು , ಬಟ್ಟೆಗಳು, ತಿಂಡಿ ತಿನಿಸು,   ಎಲ್ಲವೂ ಇಲ್ಲಿದ್ದವು.  ಕಮ್ಮಿ ಬೆಲೆಯಲ್ಲಿ.  ಚೌಕಾಶಿ ವ್ಯಾಪಾರಕ್ಕೆ ಅನುಕೂಲವಾಗಿತ್ತು.  ನಾವು  ಅದು ಇದು ಎಂದು ಏನೇನೋ  ಖರೀದಿಸಿದೆವು . 

ಹಾಗೆ ಮುಂದೆ ಹೋಗಿ ದೊಡ್ಡ ಅಂಗಡಿ ಹೊಕ್ಕೆವು . ಇಲ್ಲಿ ಚಾಕೊಲೆಟ್  ಚೆನ್ನಾಗಿರೋದು ಕಮ್ಮಿ ಬೆಲೆಯಲ್ಲಿ ಸಿಗುತ್ತದೆ ಎಂದು ಕೇಳಿದ್ದರಿಂದ ಅದನ್ನು ಖರೀದಿಸಲು ಹೋದೆವು. ಅಂಗಡಿಯಲ್ಲಿ ಚಾಕೊಲೆಟ್ ಸೆಕ್ಷನ್  ನೋಡಿ ನಮಗೆ ತಲೆ ತಿರುಗಿದಂತಾಯ್ತು. ಇದುವರೆಗೆ ಕಂಡಿರದ, ಕೇಳಿರದ  ಅದೆಷ್ಟೋ ಬಗೆಯ ಚಾಕೊಲೆಟ್ ಗಳು ..ಬಾಯಲ್ಲಿ ನೀರು ತರುತ್ತಿದ್ದವು. ದರ ಕೂಡ  ಕಮ್ಮಿಯೇ. ಒಂದಿಷ್ಟು  ಪ್ಯಾಕೆಟ್ ತೆಗೆದುಕೊಂಡು ಬುಟ್ಟಿಗೆ ಹಾಕಿದೆವು . ಪಕ್ಕದಲ್ಲಿ   ವಿದೇಶಿ ಮದ್ಯ  ವಿಭಾಗವೂ ಇತ್ತು. ಅಲ್ಲಿ ವಿಶೇಷವಾಗಿ ವೈನ್ ಅನ್ನು ತಯಾರಾದ ಇಸವಿಯ ಪ್ರಕಾರ  ಶೆಲ್ಪ್ಹ್ ಗಳಲ್ಲಿ ನೀಟಾಗಿ ಜೋಡಿಸಿಡಲಾಗಿತ್ತು . ವೈನ್ ಹಳೆಯದಾದಷ್ಟೂ  ಅದರ ಬೆಲೆ , ಪ್ರತಿಷ್ಠೆ ಹೆಚ್ಚು ! 

ಮೂಲತಃ ಮುಸ್ಲಿಂ ದೇಶವಾದ  ಮಲೇಶಿಯಾದಲ್ಲಿ  ದೇಶೀಯರು ಕುಡಿಯದಿದ್ದರೂ , ಪ್ರವಾಸೋದ್ಯಮ  ಇಲ್ಲಿಯ  ಆರ್ಥಿಕತೆಗೆ  ದೊಡ್ಡ ಕೊಡುಗೆ ನೀಡುವುದರಿಂದ ,  ಮದ್ಯ  ಮಾರಾಟಕ್ಕೆ ನಿರ್ಬಂಧವಿಲ್ಲ .  ಅಲ್ಲದೆ ಲಂಕಾವಿಯಲ್ಲಿ  ಎಲ್ಲವೂ ತೆರಿಗೆ ಮುಕ್ತ !  ಚಾಕೊಲೆಟ್ ನಿಂದ  ಕಾರಿನ ವರೆಗೂ  !!!!  ಹೀಗಾಗಿ, ಇಲ್ಲಿಂದ  ಮದ್ಯದ ಬಾಟಲಿಗಳನ್ನು ಒಯ್ಯುವ ಪ್ರವಾಸಿಗಳು ತುಂಬಾ ಇದ್ದಾರೆ.  ಹಾಗೆಂದು  ಇದಕ್ಕೂ ನಿರ್ಬಂಧವಿದೆ . ಮದ್ಯದ ಬಾಟಲಿಗಳನ್ನು  ನಿಮ್ಮೊಡನೆ ಊರಿಗೆ ಒಯ್ಯಲು  ನೀವು ಲಂಕಾವಿಯಲ್ಲಿ ಕನಿಷ್ಠ  ೨೪ ತಾಸುಗಳ ವಾಸ್ತವ್ಯ ಮಾಡಿರಬೇಕು . ನೀವು ಉಳಿದು ಕೊಂಡ  ಪ್ರತಿ  ದಿನಕ್ಕೆ ಒಂದು ಬಾಟಲಿಯಂತೆ  ಒಯ್ಯಬಹುದು ಎಂದೇನೋ ಹೇಳಿದ ನಮ್ಮ ಡ್ರೈವರ್ .
ನಾವು  ನಮ್ಮ ಖರೀದಿ ಮುಗಿಸಿ ,  ಹೋಟೆಲ್ ಗೆ ಮರಳಿದೆವು. ದಾರಿಯಲ್ಲಿ ಒಂದು ಹಣ್ಣಿನ ಅಂಗಡಿ ಕಂಡಿತು. ಹಲಸು , ಬಾಳೆಹಣ್ಣು , ಉದ್ದನೆಯ ಸಪೂರವಾಗಿರುವ ಮಾವಿನ ಹಣ್ಣು  ಹೀಗೆ ಹಲವಾರು ಹಣ್ಣುಗಳಿದ್ದವು  . ಬಲು ತೀಕ್ಷ್ಣ  ವಾಸನೆಯ  'ಡೂರಿಯನ್ ' ಕೂಡ ಇತ್ತು.  ಹಲಸಿನಂತೆಯೇ ಕಾಣುವ ಈ ಹಣ್ಣೆಂದರೆ  ಜನ ತಿನ್ನಲು ಬಾಯ್ಬಿಡುತ್ತಾರಂತೆ. ಆದರೆ ಅದರ ವಾಸನೆ ಮಾತ್ರ ಅತೀ ತೀಕ್ಷ್ಣ . ಸಿಂಗಾಪುರ್, ಥೈಲ್ಯಾಂಡ್  ಮುಂತ್ತಾದ ಕಡೆ  ಹೋಟೆಲ್ ಗಳಲ್ಲಿ ಈ ಹಣ್ಣನ್ನು ತರದಂತೆ ನಿರ್ಬಂಧಿಸಿದ್ದಾರೆ. ನಾವು ಥೈಲ್ಯಾಂಡ್ ಪ್ರವಾಸದಲ್ಲಿ ಕುತೂಹಲದಿಂದ ಇದನ್ನು ತಿಂದಿದ್ದೆವಾದರೂ ಹಿಟ್ಟು ಹಿಟ್ಟಾದ, ತಿಂದು ಬಹಳ ಹೊತ್ತಿನ ವರೆಗೂ ಬಾಯಲ್ಲಿ ಉಳಿಯುವ ಅದರ ರುಚಿ .. ನನಗಂತೂ ಇಷ್ಟವಾಗಿರಲಿಲ್ಲ  .
ಡೂರಿಯನ್  ಹಣ್ಣು 




ಇಲ್ಲಿನ ಅಂಗಡಿಯಲ್ಲಿ  ನಮ್ಮೂರಿನಂತದ್ದೆ , ಪುಟ್ಟ ಬಾಳೆಹಣ್ಣು  ನೋಡಿ ಆಸೆಯಾಯಿತು.  ಅಂಗಡಿ ಹೊಕ್ಕು ಬಾಳೆ ಹಣ್ಣನ್ನೂ , ಅಲ್ಲೇ ಕಂಡ ಮ್ಯಾಂಗೋ ಸ್ಟೀನ್  ಹಣ್ಣನ್ನೂ ಕೊಂಡೆವು.  ಈ ಮ್ಯಾಂಗೋ ಸ್ಟೀನ್ ಕೂಡ  ತಿನ್ನಲು ರುಚಿಯಾಗಿರುತ್ತದೆ. ನೋಡಲು  ಮುರುಗಲು  ( ಪುನರ್ಪುಳಿ / ಕೋಕಂ) ಹಣ್ಣಿನಂತೆಯೇ  ಕಾಣುವ ಇದರ ತಿರುಳನ್ನು ತಿನ್ನಬೇಕು. ನಂಗೆ ತುಂಬಾ ಇಷ್ಟವಾಯ್ತು ಈ ಹಣ್ಣು .

ಮ್ಯಾಂಗೋ ಸ್ಟೀನ್ 



ಸರಿ, ರೂಮಿಗೆ ಬಂದು ಪ್ಯಾಕಿಂಗ್ ಮುಗಿಸಿ ಮಲಗಿದೆವು. ಬೆಳಿಗ್ಗೆ ೮ ಕ್ಕೆಲ್ಲ  ಕಾರು ಬರುವುದಿತ್ತು. ನಮ್ಮನ್ನು ಏರ್ ಪೋರ್ಟ್  ಗೆ ಕರೆದೊಯ್ಯಲು . ಬೆಳಿಗ್ಗೆ  ಬೇಗ ಎದ್ದು ತಯಾರಾಗಿ  ತಿಂಡಿ ತಿಂದೆವು. ಸಮಯಕ್ಕೆ ಸರಿಯಾಗಿ ಬಂದ ಕಾರಿನಲ್ಲಿ ವಿಮಾನ ನಿಲ್ದಾಣಕ್ಕೆ ಹೊರಟೆವು.  ಕೊನೆಯಬಾರಿಗೆ  ಲಂಕಾವಿ ಯ ರಮಣೀಯ  ಸೌಂದರ್ಯವನ್ನು ಕಣ್ಣಿನಲ್ಲಿ ತುಂಬಿಕೊಳ್ಳುತ್ತಾ  ನಿಲ್ದಾಣ ತಲುಪಿದೆವು. ಯಾವುದೇ ಸೆಕ್ಯೂರಿಟಿ ಚೆಕಿಂಗ್  ಗಲಾಟೆಯಿಲ್ಲದೆ  ಸಣ್ಣ  ಕ್ಯೂದಲ್ಲಿ ನಿಂತು  ಒಳಗೆ ಲಾಂಜ್ ನಲ್ಲಿ ಹೋಗಿ ಕುಳಿತೆವು. ಬಹುಮಟ್ಟಿಗೆ ಖಾಲಿಯೇ ಇದ್ದ  ಲಾಂಜ್ ನಿಂದ ಎದುರಿಗೆ  ವಿಮಾನಗಳ ಬರು-ಹೋಗುವಿಕೆ ಸ್ಪಷ್ಟವಾಗಿ ಕಾಣುತ್ತಿತ್ತು. ಅಲ್ಲೇ  ರನ್  ವೆ ಯ ಪಕ್ಕವೇ ಚಂದದ ಮನೆಯೊಂದು ತೋಟ , ಗದ್ದೆಗಳ ನಡುವೆ  ತಂಪಾಗಿ ಕುಳಿತಿತ್ತು .

ವಿಮಾನ ನಿಲ್ದಾಣದ  ಪಕ್ಕಕ್ಕೆ ಮನೆಯ ಮಾಡಿ ... ಶಬ್ದಕ್ಕೆ ಅಂಜಿದೊಡೆ ..... 







Add caption



ಈ ಮನೆಯವರು  ಪ್ರೈವೇಟ್  ವಿಮಾನ   ಇಟ್ಟಿದ್ದಾರೆಯೇ ?



ಲಾಂಜ್  ನಲ್ಲಿ  ನಾನು , ಮಹೇಶ್ 




ಇಬ್ಬರು ಚಿಕ್ಕ ಮಕ್ಕಳೊಂದಿಗೆ  ಪ್ರಯಾಣಿಸುತ್ತಿದ್ದ  ಜೋಡಿಯೊಂದು  ನಮಗೆ  ಸಮಯ ಕಳೆಯಲು  ನೆರವಾಯಿತು.  ನಾವೇನೂ ಅವರ ಜೊತೆ ಮಾತನಾಡಲಿಲ್ಲವಾದರೂ  ಆ ಪುಟ್ಟ ಮಕ್ಕಳ ಆಟ  ನೋಡಲು ಖುಷಿಯಾಗುತ್ತಿತ್ತು. ದೊಡ್ಡ  ಚಾಕೊಲೆಟ್   ಬಾರ್ ತಿನ್ನುತ್ತ  ಮುಖ - ಮೈ ಎಲ್ಲಾ ಚಾಕೊಲೆಟ್ ಮಾಡಿಕೊಂಡು ಅಲ್ಲೇ ಅಂಗಿಗೆ  ಕೈ ಒರೆಸಿಕೊಳ್ಳುತ್ತಿದ್ದ  ಮಕ್ಕಳನ್ನು ಕಂಡಾಗ  ಎಲ್ಲಿ ಹೋದರೂ ಮಕ್ಕಳು ಒಂದೇ ತರ ಎನಿಸಿ ನಗು ಬಂತು.

ಚಾಕೊಲೆಟ್  ಹುಡುಗ ! 


ಅಷ್ಟರಲ್ಲಿ ನಮ್ಮ ವಿಮಾನ ಬಂದಿದ್ದರಿಂದ  ಆ ಕಡೆ ಲಕ್ಷ್ಯ ಹರಿಸಿದೆವು. ವಿಮಾನವೇರಿ  ನಮ್ಮ ಸೀಟಿನಲ್ಲಿ ಕುಳಿತು  ಮುಂದಿನ  ಒಂದೂವರೆ ಗಂಟೆಯೊಳಗೆ  ನಾವು ನೋಡುವ  ಕೌಲಾಲಂ ಪುರ ದ ಬಗ್ಗೆ  ಕಾತುರದಿಂದ ಕಾಯ ತೊಡಗಿದೆವು. 

July 23, 2011

ಮನಸೆಳೆದ ಮಲೇಶಿಯಾ - ಭಾಗ ೪


ಆತ್ಮಾ ಆಲಂ  ಬಾಟಿಕ್  ಸೆಂಟರ್  :

ಲಂಕಾವಿಗೆ ಬಂದವರು ಸಾಧಾರಣವಾಗಿ ಈ ಬಾಟಿಕ್ ಸೆಂಟರ್ ಗೆ ಭೇಟಿ ಕೊಡದೆ ಇರುವುದಿಲ್ಲ .  ಬಾಟಿಕ್   ಒಂದು ಸಾಂಪ್ರದಾಯಿಕ ಕಲೆ.  ಮೂಲತಃ ಜಾವಾ  ದ್ವೀಪದ್ದು ಎನ್ನಲಾಗುವ ಇದು  ದಕ್ಷಿಣ ಹಾಗೂ ಆಗ್ನೇಯ ಏಶಿಯಾದ  ಬಹಳಷ್ಟು ದೇಶಗಳಲ್ಲಿ ಕಂಡುಬರುತ್ತದೆ  ಹಾಗೆಯೇ ಆಫ್ರಿಕಾದ ಕೆಲ ದೇಶಗಳಲ್ಲೂ ಸಹ  .  ಇಂಡೋನೇಶಿಯಾ , ಭಾರತ, ಮಲೇಶಿಯಾ, ಚೀನಾ , ಶ್ರೀಲಂಕಾ ,ಈಜಿಪ್ಟ್ ,  ನೈಜೀರಿಯಾ  ಗಳು ಕೆಲ ಹೆಸರುಗಳು . ಸಾಧಾರಣವಾಗಿ  ಮೃದು ಹತ್ತಿಯ  ಹಾಗೂ ರೇಶಿಮೆಯ  ಬಟ್ಟೆಯನ್ನು  ಬಾಟಿಕ್ ನಲ್ಲಿ ಬಳಸಲಾಗುತ್ತದೆ. ಬಿಳಿ ಅಥವಾ, ತಿಳಿವರ್ಣದ ಬಟ್ಟೆಯನ್ನು ಆರಿಸಿಕೊಂಡು  ಅದರಮೇಲೆ  ಬೇಕಾದ  ಡಿಸೈನ್  ಅನ್ನು ಪೆನ್ಸಿಲ್ ನಿಂದ ತೆಳುವಾಗಿ  ಬರೆದು ಕೊಳ್ಳಬೇಕು . ಆ ನಂತರ  ಎಲ್ಲಿ  ಮೂಲ ಬಣ್ಣ  ಹಾಗೇ  ಇರಬೇಕೋ ಆ ಭಾಗಕ್ಕೆ  ಕರಗಿದ  ಬಿಸಿ ಮೇಣವನ್ನು ( ಹೆಚ್ಚಾಗಿ  ಜೇನು ಮೇಣ  ಅಥವಾ  ದ್ರವ ರೂಪದ  ಪ್ಯಾರಫಿನ್ ) ಅದಕ್ಕಾಗೆ ಇರುವ  ವಿಶೇಷ ಉಪಕರಣದಿಂದ ಅಥವಾ ಕುಂಚದಿಂದ   ಸವರಲಾಗುತ್ತದೆ. ಆ ನಂತರ ಉಳಿದ ಭಾಗಕ್ಕೆ  ಇಷ್ಟವಾದ ಬಣ್ಣ  ವನ್ನು ಹಚ್ಚ ಬಹುದು  ಅಥವಾ  ಬಣ್ಣದಲ್ಲಿ ಮುಳುಗಿಸ ಬಹುದು.  ಈ ಕರಗಿದ ಮೇಣವನ್ನು ಬಟ್ಟೆ  ಹೀರಿಕೊಳ್ಳುವುದರಿಂದ  ಆ ಭಾಗ ಮೂಲವರ್ಣವನ್ನು ಉಳಿಸಿಕೊಳ್ಳುತ್ತದೆ. ಮತ್ತೂ ಬೇರೆ ಬೇರೆ ಬಣ್ಣ ಗಳನ್ನು  ಬಳಸುವುದಿದ್ದರೆ ,  ಬಟ್ಟೆ ಪೂರ್ಣವಾಗಿ ಒಣಗಿದ ಮೇಲೆ ಮತ್ತೊಮ್ಮೆ   ಇದನ್ನು ಮರುಕಳಿಸಬಹುದು .  ತಾಳ್ಮೆ  ಹಾಗೂ ನಾಜೂಕುತನ ಎರಡೂ ಬೇಕು  ಈ ಬಾಟಿಕ್ ಗೆ .
ಬಾಟಿಕ್ ಮಾಡುವುದರಲ್ಲಿ ನಿರತಳಾದ ಮಹಿಳೆ  ( ಅಂತರ್ಜಾಲದಿಂದ) 



ಇಲ್ಲಿಯ ಬಾಟಿಕ್ ಸೆಂಟರ್ ನಲ್ಲಿ  ೧-೨ ದಿನಗಳ ವರ್ಕ್ ಶಾಪ್  ಕೂಡ ಇರುತ್ತದೆ.  ಹಣ ಕಟ್ಟಿ   ಬಾಟಿಕ್  ಮಾಡುವ ವಿಧಾನವನ್ನು ಕಲಿಯಬಹುದು. 
ಈ ಸೆಂಟರ್ ಗೆ ನಾವು ಹೋದಾಗ  ಕೆಲವು ಹುಡುಗಿಯರು  ಬಾಟಿಕ್ ನ ವೀವಿಧ ಹಂತಗಳಲ್ಲಿ  ತೊಡಗಿಕೊಂಡಿದ್ದರು.  ಕೆಲ ಸಮಯ ಅದನ್ನು ನೋಡಿ ನಂತರ ಅಲ್ಲೇ ಇದ್ದ  ಮಾರಾಟ ಕೇಂದ್ರಕ್ಕೆ ಹೋದೆವು . ಬಾಟಿಕ್ ಕಲೆ  ಬಳಸಿದ ಬಹಳಷ್ಟು  ವಸ್ತುಗಳು ಅಲ್ಲಿದ್ದವು . ಪರ್ಸ್ ಗಳು, ಬೆಡ್ ಶೀಟ್, ದಿಂಬಿನ ಕವರ್, ಕುಶನ್ ಕವರ್, ಡೈನಿಂಗ್ ಟೇಬಲ್ ಮೇಲೆ ಹಾಸುವ ಬಟ್ಟೆ, ಅಲ್ಲದೆ  ಡ್ರೆಸ್  ಹೊಲಿಸ ಬಹುದಾದಂಥ ಬಟ್ಟೆಗಳಂತೂ ಬಹಳ ಇದ್ದವು. ಅಪ್ಪಟ ರೇಶಿಮೆಯ ಮೇಲೆ  ಬಾಟಿಕ್ ಮಾಡಿದ  ' " ಸಾರೊಂಗ್  "  ಮನಮೋಹಕವಾಗಿದ್ದವು .

ಬಾಟಿಕ್  ಮಾಡಿದ ಬಟ್ಟೆ  ( ಚಿತ್ರ ಕೃಪೆ :ಅಂತರ್ಜಾಲದಿಂದ) 


ಬಾಟಿಕ್  ಮಾಡಿದ ಬಟ್ಟೆ  ( ಚಿತ್ರ ಕೃಪೆ :ಅಂತರ್ಜಾಲದಿಂದ) 

' ಸಾರೊಂಗ್ '   ಇದು ಒಂಥರಾ ನಮ್ಮಲ್ಲಿಯ ಲುಂಗಿಯಂತೆಯೇ  ಇರುತ್ತದೆ.   ಇದನ್ನು ಇಲ್ಲಿ ಉದ್ದವಾದ ಮೇಲಂಗಿ ತೊಟ್ಟು ಕೆಳಗೆ  ಲುಂಗಿಯಂತೆ  ಧರಿಸುತ್ತಾರೆ. ಹೆಂಗಸರೂ ಗಂಡಸರಿಗೂ ಇಬ್ಬರೂ ಇದನ್ನು ಧರಿಸುತ್ತಾರೆ . ಇದು  ಸಾಂಪ್ರದಾಯಿಕ ಉಡುಪಂತೆ ! ಮುಸ್ಲಿಂ ದೇಶವಾದ ಇಲ್ಲಿ , ಶುಕ್ರವಾರದ ಪ್ರಾರ್ಥನೆಗೆ  ಸಾರೊಂಗ್ ಉಟ್ಟೆ  ಹೋಗುವರಂತೆ. ಕಣ್ಣಿಗೆ ಹೊಡೆಯುವಂಥಾ ಬಣ್ಣದ  ಸಾರೊಂಗ್  ಇವರಿಗೆ ಆಕರ್ಷಣೆ .  


ಸಾರೊಂಗ್ ಧರಿಸಿದ ಗಂಡಸರು 

ಹಾಗೆಯೇ , ನುಣುಪಾದ , ಅತಿ ಹಗುರವಾದ ,ಸೌಮ್ಯ ಬಣ್ಣದ  ಅಪ್ಪಟ ರೇಶಿಮೆಯ ಸಾರೊಂಗ್ ಗಳೂ ಇದ್ದವು . ನಾನೂ ಅಂಥಾ ಒಂದು ಸಾರೊಂಗ್  ಖರೀದಿಸಿದೆ . ಹಾಗೆಯೇ  ಕೆಲವು ಹತ್ತಿಯ ಬಾಟಿಕ್ ಬಟ್ಟೆ ಗಳನ್ನೂ  ಕೊಂಡು ಕೊಂಡೆ. 
ಅಲ್ಲಿದ್ದ  ಹುಡುಗಿಯೊಬ್ಬಳು  ಸಾರೊಂಗ್ ಅನ್ನು ಧರಿಸಬಹುದಾದ ಹಲವು  ಬಗೆಗಳನ್ನು  ಸಿರಿಗೆ ಹೇಳಿಕೊಟ್ಟಳು .  ಕೇವಲ ಲುಂಗಿಯಂತೆ ಮಾತ್ರವಲ್ಲದೆ  , ಬೇಸಿಗೆ ಉಡುಪಂತೆ , ಬೀಚ್ ನಲ್ಲಿ ಧರಿಸುವಂತೆ , ಹೀಗೆ  ಸುಮಾರು ೮ ರೀತಿಗಳಲ್ಲಿ ಇದನ್ನು ಉಡಬಹುದು. ಖರೀದಿಸುವ  ಸಾರೊಂಗ್ ಜೊತೆ ಅದನ್ನು  ಉಡುವ ರೀತಿಯನ್ನೂ ಕೂಡ  ಸಚಿತ್ರವಾಗಿ ವಿವರಿಸಿದ  ಕಾಗದವನ್ನು ನಮಗೆ ಕೊಟ್ಟರು .  ಹಸನ್ಮುಖರಾಗಿ ನಮ್ಮೆಲ್ಲ ಪ್ರಶ್ನೆಗಳನ್ನು ತಾಳ್ಮೆಯಿಂದ ವಿವರಿಸುವ ಅವರ ರೀತಿ ನಮಗೆ ಬಹಳ ಇಷ್ಟವಾಯ್ತು. ಅಲ್ಲಿಂದ ನಾವು ಖರೀದಿಸಿದ ಬಟ್ಟೆಗಳ ಬ್ಯಾಗ್ ಹಿಡಿದು ಹೊರಟೆವು  .

ಬಾಟಿಕ್ ಮಾಡುವ ಸರಳ ವಿಧಾನಗಳು  ಅಂತರ್ಜಾಲದಲ್ಲಿ  ಲಭ್ಯವಿದೆ. ಅಂತಹ ಒಂದು ಲಿಂಕ್ ಅನ್ನು ಇಲ್ಲಿ ಕೊಟ್ಟಿದ್ದೇನೆ.  

ಅಲ್ಲಿಂದ ಮುಂದೆ ನಮ್ಮ ಪಯಣ  "ಈಗಲ್ ಸ್ಕ್ವೇರ್ "  ಗೆ.

ಹೆಚ್ಚು ವಾಹನದಟ್ಟಣೆ  ಇಲ್ಲದ ಸಮತಟ್ಟಾದ  ,ಅಕ್ಕ ಪಕ್ಕ ಹಸಿರು ತುಂಬಿದ ಹಾದಿಯಲ್ಲಿ ಸಾಗುತ್ತಾ, ಮೈಮರೆತಿದ್ದೆವು. ಲಂಕಾವಿ ಪಟ್ಟಣ ದಲ್ಲಿ  ನಮ್ಮ ಹೋಟೆಲ್ ನಿಂದ ೨-೩ ಕಿ.ಮೀ ದೂರದಲ್ಲಿರುವ  ' ಲಂಕಾವಿ ಡೆವಲಪ್ ಮೆಂಟ್  ಅಥಾರಿಟಿ '  ಯ ಬಹುದೊಡ್ಡ   ಕ್ಯಾಂಪಸ್ ನಲ್ಲಿ  ೧೯ ಎಕರೆಯ   ಗಾರ್ಡನ್  ಇದೆ. ಇಲ್ಲಿ ಸಮುದ್ರಕ್ಕೆದುರಾಗಿ  ನಿರ್ಮಿಸಿದ  ನಕ್ಷತ್ರಾಕಾರದ  ಎತ್ತರದ ಕಟ್ಟೆಯ ಮೇಲೆ  ಲಂಕಾವಿಯ  ಹೆಮ್ಮೆಯ  ಗುರುತಾದ  ಕಂದು ಗೆಂಪು   ಹದ್ದಿನ ೧೨ ಮೀಟರ್  ಎತ್ತರದ ಪ್ರತಿಮೆಯನ್ನು ಸ್ಥಾಪಿಸಲಾಗಿದೆ .

ಚಿತ್ರ ಕೃಪೆ : ಅಂತರ್ಜಾಲ

ಅದರ ಸುತ್ತ ಸುಂದರವಾದ  ಗಾರ್ಡನ್ , ಕಾರಂಜಿಗಳು , ಬಣ್ಣ ಬಣ್ಣದ ಗಿಡ ಮರಗಳು . ಈ ಪ್ರತಿಮೆಯ ಹಿಂಭಾಗದಲ್ಲಿರುವ ಮೆಟ್ಟಿಲುಗಳಿಗೆ ತುಂಬಾ ಚಂದದ  ಟೈಲ್ಸ್ ಹಾಕಲಾಗಿದೆ . ಸುಂದರವಾದ ಕಾರ್ಪೆಟ್ ಹಾಸಿದಂತೆಯೇ ಕಾಣುತ್ತದೆ . ನಾವು ಕಾರಿನಿಂದ ಇಳಿಯುವಷ್ಟರಲ್ಲಿ  ಜೋರಾಗಿ ಮಳೆ  ಶುರುವಾಯಿತು . ನಮ್ಮ ಬಳಿ ಕೊಡೆ ಇರಲಿಲ್ಲ  ಆದರೂ ಓಡಿ ಹೋಗಿ  ಅಲ್ಲಿರುವ   ವ್ಯಾಪಾರಿ ಮಳಿಗೆಯಲ್ಲಿ  ನಿಂತೆವು.  ೫ ನಿಮಿಷದಲ್ಲಿ ಮಳೆ ನಿಂತಿತು.


ಕಾರ್ಪೆಟ್ ಹಾಸಿದಂತೆ ಕಾಣುವ ಟೈಲ್ಸ್ ಗಳು 


ನಾವೂ ಕೂಡ  ಹದ್ದಿನ ಬಳಿ ಹೋದೆವು. ಅತ್ಯಂತ ನೈಜವಾಗಿ ನಿರ್ಮಿಸಲಾದ ಈ ಪ್ರತಿಮೆ  ತುಂಬಾ ಸುಂದರವೂ ಹೌದು ! ಸಮುದ್ರಾಭಿಮುಖವಾಗಿರುವ  ಈ ಹದ್ದು  ಲಂಕಾವಿಯನ್ನು ಕಾಯಲು  ನಿಂತಂತೆ ಕಾಣಿಸುತ್ತದೆ .  ಇದನ್ನು " Icon of Langkawi"  ಎಂದೂ ಕೂಡ ಕರೆಯುತ್ತಾರೆ . ಸಮುದ್ರ ಮಾರ್ಗವಾಗಿ ಲಂಕಾವಿಗೆ ಬರುವವರನ್ನು ಮೊದಲು ಸ್ವಾಗತಿಸುವುದು ಈ ಪ್ರತಿಮೆ. ತನ್ನ ಭವ್ಯ ಆಕಾರದಿಂದ  ಬಹುದೂರದಿಂದಲೂ ಕಾಣಿಸುತ್ತದೆ .



ಇಲ್ಲಿಂದ  ನಮ್ಮ ಹೋಟೆಲ್ ಕೂಡ  ಸ್ಪಷ್ಟವಾಗಿ ಕಾಣಿಸುತ್ತಿತ್ತು . ಹಸಿರು ಬೆಟ್ಟ ಹಾಗೂ ಮಂಜು ಮುಸುಕಿದ ಹಿನ್ನೆಲೆಯಲ್ಲಿ ಬಲು ಆಕರ್ಷಕವಾಗಿ ಕಾಣುತ್ತಿತ್ತು. ಮತ್ತೆ ಮಳೆ ಬರುವ ಲಕ್ಷಣ  ಕಂಡಿದ್ದರಿಂದ  ಅಲ್ಲಿಂದ ಹೊರಟೆವು.  ಹೊರಡುವ ಮುನ್ನ ಮತ್ತೊಮ್ಮೆ  , ಭವ್ಯವಾದ ಹದ್ದನ್ನೂ  ಸುತ್ತಲೂ ನಿರ್ಮಿಸಿದ್ದ ಮನಸೆಳೆಯುವ ಹೂದೊಟವನ್ನೂ ಕಣ್ಣಲ್ಲಿ ತುಂಬಿಕೊಂಡೆವು. 

ಮಧ್ಯದಲ್ಲಿ ಕಾಣುವ ಬಿಳಿಯ ಕಟ್ಟಡ ನಮ್ಮ ಹೋಟೆಲ್ 

ಅಲ್ಲಿಂದ ನಮ್ಮ ಡ್ರೈವರ್  ನಮ್ಮನ್ನು ಹತ್ತಿರದ  ಶಾಪಿಂಗ್  ಏರಿಯಾಕ್ಕೆ ಕರೆದುಕೊಂಡು ಹೋದ.  ನಮ್ಮ ಜೊತೆಯಿದ್ದ ಜೋಡಿ  ಅಲ್ಲಿ  ಖರೀದಿಗಾಗಿ ಇಳಿದರು. ನಾವು ಆಗಲೇ ಸುಸ್ತಾಗಿದ್ದರಿಂದ  ಮರಳಿ ಹೋಟೆಲ್ ಗೆ ಬಿಡಲು ಹೇಳಿದೆವು. ಅಲ್ಲದೆ , ಬೆಳಿಗ್ಗೆ  ಬೇಗ ಹೊರಡ ಬೇಕಿತ್ತು,  ಮುಂದಿನ  ಕೌಲಾಲಂ ಪುರ ಪ್ರಯಾಣಕ್ಕಾಗಿ ....




July 3, 2011

ಮನಸೆಳೆದ ಮಲೇಶಿಯಾ ಭಾಗ -೩





ಸುಂದರ , ಸ್ವಚ್ಛ , ಶುಭ್ರ ಮರಳಿನ  ಬೀಚ್ 

ಮುಂದಿನ ದ್ವೀಪದಲ್ಲಿ ಇದ್ದ ಆಕರ್ಷಣೆ  ಎಂದರೆ ಪುಟ್ಟ  ಆದರೆ ಬಲು ಸುಂದರವಾದ ' ಬೀಚ್ '  ! ನುಣುಪಾದ ಬಿಳಿ ಮರಳು , ಅದನ್ನು ಮುತ್ತಿಕ್ಕುವ  ಶಾಂತವಾದ ಸಮುದ್ರ !  ದೂರದಿಂದ ನೋಡುವಾಗಂತೂ  ಹಸಿರು ಕಡಲು ಹಾಗು ಬಿಳಿಯ ಮರಳಿನ  ಕಾಂಬಿನೇಶನ್  ತುಂಬಾ ಚೆನ್ನಾಗಿ ಕಾಣುತ್ತಿತ್ತು .  ಅಲ್ಲದೆ , ಹಚ್ಚ ಹಸಿರು ಮರಗಿಡಗಳ ಹಿನ್ನೆಲೆ ಕೂಡ  ಬೀಚ್ ನ ಸೌಂದರ್ಯವನ್ನು  ಹೆಚ್ಚಿಸುತ್ತಿತ್ತು. ನಾವು ತಲುಪುವಾಗ ಆಗಲೇ  ಹೊತ್ತು ಮೇಲೇರಿತ್ತು ! ಬಹಳಷ್ಟು ಪ್ರವಾಸಿಗಳು ಆಗಲೇ ಬೀಚ್  ನ ಸೌಂದರ್ಯವನ್ನು ಆಸ್ವಾದಿಸುತ್ತಾ  ಮೈಮರೆತಿದ್ದರು .





ಈ ಬೀಚ್ ನಲ್ಲಿ ಕೂಡ ಒಂದು ಚಿಕ್ಕ ಅಂಗಡಿ ಬಿಟ್ಟರೆ  ಮತ್ತೇನೂ ಇಲ್ಲ.  ಕೆಲವು  ಪುಟ್ಟ ಕ್ಯಾಬಿನ್ ಗಳು ಇವೆಯಾದರೂ  ಅವು  ಯಾಕೋ ಮುಚ್ಚಿದ್ದವು. ಪ್ರತಿನಿತ್ಯ ಸಾವಿರಾರು ಪ್ರವಾಸಿಗಳು  ಇಲ್ಲಿಗೆ ಬರುತ್ತಿದ್ದರೂ ಕೂಡ  ಪ್ಲಾಸ್ಟಿಕ್ , ಪೇಪರ್ , ಬಾಟಲಿ , ಸಿಗರೆಟ್ ಪ್ಯಾಕ್ ಇತ್ಯಾದಿ ಯಾವುದೂ  ಬಿದ್ದಿರುವುದು ಕಾಣಲಿಲ್ಲ .ಈ ಬಗೆಯ ಸ್ವಚ್ಚತೆ , ಪ್ರವಾಸದುದ್ದಕ್ಕೂ ನಮ್ಮನ್ನು  ಸ್ವಾಗತಿಸುತ್ತಿತ್ತು ! 
ಪುಟ್ಟ  ಕ್ಯಾಬಿನ್ ಗಳು 






ಈ ದ್ವೀಪದಲ್ಲಿ  ' ವಾಟರ್ ಸ್ಪೋರ್ಟ್ಸ್ '  ಸೌಲಭ್ಯ ಇದೆ. ಬಹಳಷ್ಟು  ಅಲ್ಲದಿದ್ದರೂ  ' ಬನಾನಾ ಬೋಟ್  ' ,  "ಪೆಡಲಿಂಗ್ " ಹಾಗೂ  ' ಪ್ಯಾರಾ ಸೇಲಿಂಗ್'  ಇತ್ಯಾದಿ ಇವೆ.   para sailing    ಅಂದರೆ ... ಸ್ಪೀಡ್  ಬೋಟ್ ಗೆ  ಒಂದು ಪ್ಯಾರಾಶೂಟ್ ಅನ್ನು  ಉದ್ದವಾದ ಹಗ್ಗದಿಂದ ಬಿಗಿದಿರುತ್ತಾರೆ  .ಹಗ್ಗದ ಉದ್ದ ೧೫೦  ಅಡಿಗಳಿಂದ  ಹಿಡಿದು  ೬೦೦  ಅಡಿಗಳವರೆಗೂ  ಇರುತ್ತದೆ. ಇತ್ತೀಚೆ ಕೆಲವು ಕಡೆ ೮೦೦ ರಿಂದ ೧೨೦೦ ಅಡಿಗಳಷ್ಟು ಉದ್ದದ ಹಗ್ಗವನ್ನೂ ಬಳಸುವರಂತೆ !    ಈ ಉದ್ದವನ್ನು   , ಆ ಸಮುದ್ರ ಭಾಗ ಹೇಗಿದೆ , ಬೀಚ್  ನ ಉದ್ದ ಅಗಲ, ಸುತ್ತಮುತ್ತಲಿನ  ಪರಿಸರ ( ಮರ-ಗಿಡಗಳು, ಕಲ್ಲು ಬಂಡೆಗಳು ) ಇವನ್ನೆಲ್ಲ ಗಮನದಲ್ಲಿಟ್ಟುಕೊಂಡು    ನಿರ್ಧರಿಸಲಾಗುತ್ತದೆ.  ಪ್ಯಾರಾಶೂಟ್ ಗೆ ನಮ್ಮನ್ನು ಭದ್ರವಾಗಿ ಬೆಲ್ಟ್ ಗಳಿಂದ  ಕಟ್ಟಿದ ನಂತರ  ಬೋಟ್  ಓಡುತ್ತದೆ . ಹಾಗೆಯೇ ನಾವೂ ಕೂಡ  ಓಡಬೇಕು . ಸ್ಪೀಡ್ ಹೆಚ್ಚಿದಂತೆ ಪ್ಯಾರಾಶೂಟ್ ಗಾಳಿಯಲ್ಲಿ ಏರತೊಡಗುತ್ತದೆ . ಜೊತೆಗೆ ನಾವೂ ಕೂಡ !!!  ನೂರಾರು ಅಡಿ ಎತ್ತರದಿಂದ ನೇತಾಡುತ್ತಾ ಕೆಳಗೆ ಸಮುದ್ರದ  ಹಾಗೂ ಸುತ್ತ ಮುತ್ತಲಿನ ದೃಶ್ಯವನ್ನು ಆಸ್ವಾದಿಸುವುದು  ಅವಿಸ್ಮರಣೀಯ ಅನುಭವ ! . ನಾವು ಮೊದಲು ಕೆಲವರ್ಷಗಳ ಹಿಂದೆ  ಥೈಲ್ಯಾಂಡ್ ಗೆ ಹೋದಾಗ  ' ಪಟ್ಟಾಯ' ದಲ್ಲಿ ಪ್ಯಾರಾ ಸೈಲಿಂಗ್ ಮಾಡಿದ್ದೆವು.  ಹಾಗಾಗಿ .. ಇಲ್ಲಿಯೂ ಮಾಡೋಣವೆಂದು ಕೌಂಟರ್ ಗೆ ಹೋದಾಗ ನಿರಾಶೆ ಕಾದಿತ್ತು . ಅಂದು , ಮಳೆ ಇರುವುದರಿಂದ ಹಾಗೂ ಗಾಳಿ ವಿರುದ್ಧ ದಿಕ್ಕಿನಲ್ಲಿ ಬೀಸುತ್ತಿರುವುದರಿಂದ   ಎಲ್ಲಾ ವಾಟರ್ ಸ್ಪೋರ್ಟ್ಸ್ ಗಳನ್ನು ರದ್ದು ಪಡಿಸಲಾಗಿದೆ  ಎಂಬ ಉತ್ತರ ಸಿಕ್ಕಿತು.  ಅವಕಾಶ ತಪ್ಪಿದ್ದಕ್ಕೆ ಬೇಸರವಾದರೂ  ಸಮುದ್ರದಲ್ಲಿ ಕೆಲ ಸಮಯ ಆಟವಾಡಿ  ಖುಷಿಪಟ್ಟೆವು. ಸುಮಾರು ಒಂದು ಗಂಟೆಯನ್ನು  ಆ ದ್ವೀಪದಲ್ಲಿ ಕಳೆದ ಮೇಲೆ  ನಮ್ಮ ಬೋಟ್ ಗೆ ಮರಳಿದೆವು.  ಮತ್ತೆ ಮಳೆ ಸುರಿಯತೊಡಗಿತು . ಬೋಟ್ ನ ಡ್ರೈವರ್  ಮರಳಿ ಗೂಡಿಗೆ ಹೋಗುವ ಸಂಭ್ರಮದಲ್ಲಿ  ವೇಗವನ್ನು ಹೆಚ್ಚಿಸಿ ನಮ್ಮ ದೇಹದ ಕೀಲುಗಳೆಲ್ಲ ಸುಸ್ಥಿತಿಯಲ್ಲಿವೆಯೇ ಎಂದು  ಪರೀಕ್ಷಿಸಿಕೊಳ್ಳುವಂತೆ ಮಾಡಿಬಿಟ್ಟ ! 

ದೋಣಿ ಕೇಂದ್ರಕ್ಕೆ  ಬಂದಿಳಿಯುತ್ತಿದ್ದಂತೆಯೇ  , ಕೆಲವು ಫೋಟೋಗ್ರಾಫರ್ ಗಳು  ನಮ್ಮನ್ನು ಕರೆಯತೊಡಗಿದರು.  ನಾವು ಬೋಟ್ ಹತ್ತಲೆಂದು  ಹೋಗುತ್ತಿದ್ದಾಗ ಅದ್ಯಾವ ಮಾಯದಲ್ಲೋ  ನಮ್ಮ ಫೋಟೋಗಳನ್ನು ತೆಗೆದು  ಅದನ್ನು ಚಂದದ ಪ್ಲಾಸ್ಟಿಕ್ / ಮೆಲಮೈನ್  ಪ್ಲೇಟ್  ಮೇಲೆ ಮುದ್ರಿಸಿ  ಇಟ್ಟು ಬಿಟ್ಟಿರುತ್ತಾರೆ . ವಾಪಸ್ ಬರುತ್ತಿದ್ದಂತೆಯೇ ನಮ್ಮನ್ನು ಕರೆದು ತೋರಿಸುತ್ತಾರೆ. ನಮಗೆ ಇಷ್ಟವಾದರೆ , ಅವುಗಳನ್ನು ನೆನಪಿಗಾಗಿ  ಕೊಳ್ಳಬಹುದು.  ನಾವೂ ಕೂಡ  ನಮ್ಮ ಫೋಟೋಗಳನ್ನು ಕೊಂಡು ಕೊಂಡೆವು . ಅಷ್ಟೊತ್ತಿಗೆ  ನಮ್ಮ ಕಾರ್ ಕೂಡ  ಬಂತು.  ಮರ್ಸಿಡಿಸ್  ನ ೮ ಜನ ಕುಳಿತುಕೊಳ್ಳ ಬಹುದಾದ  ವಾಹನ ಅದು. ನಮ್ಮೊಂದಿಗೆ ಇನ್ನೆರಡು ನವ ಜೋಡಿಗಳು  ಕೂಡಿಕೊಂಡರು. 

ನಮ್ಮ ಮುಂದಿನ ಕಾರ್ಯಕ್ರಮ ಎಂದರೆ , ' ಅಂಡರ್ ವಾಟರ್  ವರ್ಲ್ಡ್ ' ,  ಲಂಕಾವಿಯ  ಬಾಟಿಕ್ ಸೆಂಟರ್ ' ಮತ್ತು  ' ಐಕಾನ್  ಪಾರ್ಕ್ '
ಡ್ರೈವರ್ ಕಂ ಗೈಡ್  ದಾರಿಯುದ್ದಕ್ಕೂ ಸಿಗುವ ಚಿಕ್ಕ ಪುಟ್ಟ ಊರುಗಳ  ಪರಿಚಯ ಮಾಡಿಕೊಡುತ್ತಾ ಸಾಗುತ್ತಿದ್ದ. ಅಷ್ಟರಲ್ಲಿ ನಮ್ಮೊಂದಿಗಿದ್ದ ಒಂದು ಜೋಡಿ, ತಮ್ಮ ಹೋಟೆಲ್ ಗೆ ಮರಳುವ  ಬಯಕೆ ವ್ಯಕ್ತ ಪಡಿಸಿದರು.  ಅವರ  ಹೋಟೆಲ್ ದಾರಿಯಲ್ಲೇ ಇದ್ದುದರಿಂದ  ಅವರನ್ನು ಅಲ್ಲಿ ಇಳಿಸಿ ನಾವು ಮುಂದೆ ಸಾಗಿದೆವು.  ಆಗಲೇ  ಗಂಟೆ  ೧.೧೫  . ಹೊಟ್ಟೆ ಚುರುಗುಡುತ್ತಿತ್ತು .  ಡ್ರೈವರ್  ಅಂತೂ ಒಂದು ಭಾರತೀಯ ಹೋಟೆಲ್ ನ ಎದುರು  ನಿಲ್ಲಿಸಿದ. ಅರ್ಧ ಗಂಟೆಯಲ್ಲಿ  ವಾಪಾಸಾಗಿರೆಂದೂ , ಇಲ್ಲವಾದಲ್ಲಿ  ಸಿಟಿ ಟೂರ್ ಗೆ  ಸಮಯ ಸಿಗದು ಎಂದೂ  ಹೇಳಿದ. 
ಅದು ಒಂದು ಪಂಜಾಬಿ ಹೋಟೆಲ್ . ಸುತ್ತ ಮುತ್ತಲಿನ  ವಾತಾವರಣ ತುಂಬಾ ಪ್ರಶಾಂತವಾಗಿತ್ತು . ಮರಗಿಡಗಳು,  ಹುಲ್ಲುಹಾಸು  ತಂಪೆರೆಯುತ್ತಿದ್ದವು.   ಬಾತುಕೋಳಿಗಳು ಎಲ್ಲೆಡೆ ಓಡಾಡುತ್ತಿದ್ದವು .  ನಾವು  ರೋಟಿ,  ಪನೀರ್ ಸಬ್ಜಿ  ಮತ್ತು  'ವೆಜಿಟಬಲ್ ಬಿರಿಯಾನಿ '   ಹೇಳಿದೆವು.   ಸಲ್ಪ ತಡವಾದರೂ , ಊಟ ಮಾತ್ರ ತುಂಬಾ ರುಚಿಯಾಗಿತ್ತು .  ಅಪ್ಪಟ ಭಾರತೀಯ  ರುಚಿಯ ಊಟ  ತೃಪ್ತಿ  ತಂದಿತು. 
ಅಲ್ಲಿಂದ ಮುಂದೆ  ' Under water World ' .

                                          

ಇದು ವಿವಿಧ ಬಗೆಯ  ಜಲವಾಸಿ ಜೀವಿಗಳನ್ನು  ಅಕ್ವೇರಿಯಂ ನಲ್ಲಿ  ಸಂಗ್ರಹಿಸಿ ಇಡಲಾಗಿದೆ . ಹೆಚ್ಚಾಗಿ ಇರುವುದು  ಸಿಹಿನೀರಿನಲ್ಲಿರುವ ಮೀನುಗಳು . ಸಿಹಿನೀರಲ್ಲಿ ವಾಸಿಸುವ ಅತಿ ಉದ್ದದ ಮೀನು ಎಂದು ಹೆಸರು ಪಡೆದ ಮೀನೊಂದು  ಸುಮಾರು ೩ ಅಡಿ ಗೂ ಹೆಚ್ಚು ಉದ್ದವಿತ್ತು . ಚಿತ್ರವಿಚಿತ್ರವಾದ, ಬಣ್ಣ ಬಣ್ಣದ, ಪುಟ್ಟ ಪುಟ್ಟ ಮೀನುಗಳಿಂದ ಹಿಡಿದು ದೊಡ್ಡದಾದ ಶಾರ್ಕ್ ಜಾತಿಗೆ ಸೇರಿದ ಮೀನುಗಳವರೆಗೆ ಎಲ್ಲಾ ತರದವೂ ಇಲ್ಲಿವೆ.  ಹೆಚ್ಚಾಗಿ  ಮಲೇಶಿಯಾ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಕಾಣಸಿಗುವ ಜಾತಿಗಳು . ಮೀನುಗಳಷ್ಟೇ ಅಲ್ಲದೆ , ಹವಳ ಪ್ರಾಣಿ,  ಸ್ಕ್ವಿಡ್ , ಏಡಿ, ಜೆಲ್ಲಿ ಮೀನು,  ಸಮುದ್ರ ಸೌತೆ, ಸಮುದ್ರ ಕುದುರೆ ,  ಸೀ  ಅರ್ಚಿನ್  ಹೀಗೆ ಅನೇಕಾನೇಕ ಬಗೆಯ ಸಮುದ್ರ ಜೀವಿಗಳನ್ನು ನೋಡಿದೆವು . ಅಪಾಯ ಎನಿಸಿದೊಡನೆ , ಮೈ ಉಬ್ಬಿಸುವ ' ಫಫರ್  ಫಿಶ್ ' , ತನ್ನ ವಿಚಿತ್ರ ಬಣ್ಣ ದಿಂದಾಗಿ ಎದುರಿಗೆ ಇದ್ದರೂ ಕಾಣದ  ನಕ್ಷತ್ರ ಮೀನು ,   ಇತ್ಯಾದಿಗಳನ್ನು ನೋಡಿ ಖುಷಿ ಪಟ್ಟೆವು.  ಇಲ್ಲಿ ಪೆಂಗ್ವಿನ್ ಗಳನ್ನೂ ಇಡಲಾಗಿದೆ. ಅವುಗಳಿಗೆ  ಅತ್ಯಂತ ತಂಪಾದ ವಾತಾವರಣ  ನಿರ್ಮಿಸಿಕೊಡಲಾಗಿದೆ.  ತಲೆಯ ಮೇಲೆ ಜುಟ್ಟಿರುವ ಈ ಪೆಂಗ್ವಿನ್ಗಳನ್ನು  ನೋಡಿದಾಗ  ನಾನೂ ,ಸಿರಿಯೂ ' ಮಡಗಾಸ್ಕರ್ ' ಸಿನೆಮಾವನ್ನು ನೆನಪಿಸಿಕೊಂಡು ನಕ್ಕೆವು .
ಸಿಹಿನೀರಿನ ಅತಿ ದೊಡ್ಡ ಮೀನು 

                                

ಜುಟ್ಟಿನ ಪೆಂಗ್ವಿನ್ 

ಜಲಚರಗಳಷ್ಟೇ ಅಲ್ಲದೆ , ಇಲ್ಲಿ ಮಲೇಷಿಯಾದ ಕಾಡುಗಳಲ್ಲಿ ಕಾಣ ಸಿಗುವ ಕೆಲ ಅಪರೂಪದ ಪ್ರಾಣಿ , ಪಕ್ಷಿಗಳನ್ನೂ ಇಡಲಾಗಿದೆ.  ಅವನ್ನೆಲ್ಲ ನೋಡಿಕೊಂಡು , ಹೊರಗೆ ನಮ್ಮ ಕಾರಿನ  ಬಳಿ   ಬಂದೆವು  .


                                 


 ನಮ್ಮ ಜೊತೆಯಿದ್ದ ಹೊಸ ಜೋಡಿ ,ಎಷ್ಟು ಹೊತ್ತಾದರೂ  ಹೊರಗೆ ಬರಲಿಲ್ಲ . ಸುಮಾರು ೨೦-೨೫ ನಿಮಿಷ ಕಾದ ನಂತರ  ಡ್ರೈವರ್   ತಾನೇ ಅವರನ್ನು ಹುಡುಕಿಕೊಂಡು ಬರಲು ಹೊರಟ . ಟಿಕೆಟ್ ಬೇಕಾಗಿದ್ದರಿಂದ ಅವನಿಗೇ  ಒಳಗೆ ಹೋಗುವುದು ಸಾಧ್ಯವಿರಲಿಲ್ಲ. ಆದರೆ  ಸೆಂಟರ್ ನ ಹೊರಗೆ, ಪಾರ್ಕಿಂಗ್ ನಲ್ಲಿ  ಅವರೆಲ್ಲಾದರೂ ಕಾರ್ ನ  ಗುರುತು ಹಿಡಿಯಲಾಗದೆ   ತಿರುಗುತ್ತಿರುವರೆನೋ  ಎಂದು  ಹುಡುಕತೊಡಗಿದ . ಸುಮಾರು ಅರ್ಧ ಗಂಟೆಗೆ ಅಂತೂ ಇಂತೂ ಅವರಿಬ್ಬರೂ  ಹೊರಗೆ ಬಂದರು . ಒಳಗಿರುವ ಅಂಗಡಿಗಳಲ್ಲಿ  ಏನೇನೋ ನೋಡತೊಡಗಿದವರಿಗೆ , ಸಮಯ ಸರಿದಿದ್ದೇ  ತಿಳಿಯಲಿಲ್ಲವಂತೆ . ಅಂತೂ ಅಲ್ಲಿಂದ ಹೊರಟಾಯಿತು. 

ಹವಳ ಪ್ರಾಣಿ


ನಕ್ಷತ್ರ ಮೀನು ಎಲ್ಲಿದೆ ಹೇಳಿ ?



ಟೋಪಿಯೆಂದು ತಲೆಗೆ ಇಟ್ಟೀರಿ  ಜೋಕೆ ! 




 ಹೂವಲ್ಲ , ಸಮುದ್ರ ಜೀವಿ !! 



ಮುಂದಿನ ನಿಲುಗಡೆ  " ಬಾಟಿಕ್ ಸೆಂಟರ್ ' 

















June 12, 2011

ಮನಸೆಳೆದ ಮಲೇಶಿಯಾ - ಭಾಗ ೨ ( ದ್ವೀಪದಿಂದ ದ್ವೀಪಕ್ಕೆ.....)


ಸ್ವಲ್ಪ ಹೊತ್ತು  ರೂಮಿನಲ್ಲಿ ವಿಶ್ರಮಿಸಿದವರಿಗೆ  ಕೆಳಗೆ ಕಾಣುತ್ತಿದ್ದ  ಈಜುಕೊಳ ಬಹುವಾಗಿ ಸೆಳೆಯತೊಡಗಿತು ! ಸರಿ , ತಯಾರಾಗಿ  ಖಾಲಿಯಿದ್ದ ಈಜುಕೊಳಕ್ಕೆ ಇಳಿದೆವು . ಸ್ವಚ್ಚವಾದ , ಉಗುರು ಬೆಚ್ಚಗಿದ್ದ ನೀರಿನಲ್ಲಿ ಈಜುವ  ಮಜಾನೆ ಬೇರೆ ಎನಿಸಿತು . ನಮ್ಮೂರಲ್ಲಿಯ  ಸ್ವಿಮ್ಮಿಂಗ್ ಪೂಲ್ ಗಳ  ಅವಸ್ಥೆ ನೋಡಿಯೇ  ಇಳಿಯುವುದು ಬೇಡ ಎನಿಸುತ್ತಿತ್ತು. ಇಲ್ಲೀಗ ಹಾಯಾಗಿ ಈಜ ತೊಡಗಿದೆವು. ಅಷ್ಟರಲ್ಲಿ ಅಲ್ಲಿಗೆ ಬಂದ ಕೆಲವು  ಯುವಕ ಯುವತಿಯರು  ಕೊಳಕ್ಕೆ ಧುಮುಕಿದರು .  ಮತ್ತವರ ನಗು , ಹರಟೆ ,ಒಬ್ಬರನ್ನೊಬ್ಬರು ಹಿಂದಿಕ್ಕುವ  ಉತ್ಸಾಹಗಳಿಂದ ಅಲ್ಲಿಯವರೆಗೆ ಶಾಂತವಾಗಿದ್ದ  ವಾತಾವರಣ ಮಾಯವಾಗಿ .. ಗಲಗಲ ವೆನಿಸತೊಡಗಿತು !  ಕೆಲ ಸಮಯ ಈಜಿದ ಮೇಲೆ  ಸುಸ್ತಾಗಿ ರೂಮಿಗೆ ಮರಳಿದೆವು .
 
ರೂಮಿನಲ್ಲಿದ್ದ  ವಿದ್ಯುತ್ ಕೆಟಲ್ ನಲ್ಲಿ ನೀರು ಕಾಯಿಸಿ ,   ಕಾಫೀ  ಮಾಡಿ ಕುಡಿದು  ಹೊರಗೆ ಹೊರಟೆವು.( ಹೋಟೆಲ್ ರೂಂ ಗಳಲ್ಲಿ , ಹೀಗೆ , ವಿದ್ಯುತ್ ಕೆಟಲ್ ಗಳನ್ನು , ಮಿನರಲ್ ನೀರಿನ ಬಾಟಲಿಗಳನ್ನೂ, ಕಾಫೀ  ಹಾಗೂ ಟೀ ಗಳ ಬ್ಯಾಗ್ , ಸಕ್ಕರೆ ಪೊಟ್ಟಣ ಹಾಗೂ  ಹಾಲಿನ ಪುಡಿ ಪೊಟ್ಟಣಗಳನ್ನು   complimentary ಯಾಗಿ ಇಟ್ಟಿರುತ್ತಾರೆ) .  ಬೆಳಿಗ್ಗೆ ನೋಡಿದ ರಸ್ತೆಗಳನ್ನು ಬಿಟ್ಟು ಪಕ್ಕದ ರಸ್ತೆಗಳಿಗೆ ನುಗ್ಗಿದೆವು. ಆ   ಇಡೀ  ಪ್ರದೇಶ ತುಂಬಾ ಚೆನ್ನಾಗಿ ಪ್ಲಾನ್ ಮಾಡಿ ಅಭಿವೃದ್ಧಿ ಗೊಳಿಸಲಾಗಿದೆ ಎನಿಸಿತು. ಸಣ್ಣ ಸಣ್ಣ ಬ್ಲಾಕ್ ಗಳನ್ನು ಮಾಡಿದ್ದಾರೆ. ಬ್ಲಾಕ್ ಗಳ ನಾಲ್ಕೂ ದಿಕ್ಕಿಗೆ ರಸ್ತೆಗಳಿವೆ.  ನಡು ನಡುವೆ  ಒಂದು ರಸ್ತೆಯಿಂದ ಇನ್ನೊಂದಕ್ಕೆ  ಶಾರ್ಟ್ ಕಟ್ ಗಲ್ಲಿಗಳಿವೆಯಾದರೂ  ಕಮ್ಮಿ. ಮತ್ತು ಆ ಗಲ್ಲಿಗಳೂ ಕೂಡ  ೭-೮ ಅಡಿ ಅಗಲವಿದ್ದು ಸ್ವಚ್ಚವಾಗಿವೆ . ನಾವಿದ್ದ ಪ್ರದೇಶದಲ್ಲಿ ಬಹು ಮಹಡಿ ಕಟ್ಟಡಗಳು  ಕಮ್ಮಿ ಇದ್ದವು. ಹೆಚ್ಚಾಗಿ ಹೋಟೆಲ್ ಅಥವಾ ಶಾಪಿಂಗ್ ಮಾಲ್ ಗಳನ್ನು ಬಿಟ್ಟರೆ  ಲಂಕಾವಿಯಲ್ಲಿ  ಬಹು ಮಹಡಿ ಕಟ್ಟಡಗಳು ಅತೀ ಕಡಿಮೆ ಎನ್ನ ಬಹುದು.  ಇದೇ ಕಾರಣಕ್ಕಾಗಿ ಇರಬಹುದು .. ಸಣ್ಣ ಪಟ್ಟಣದ ಸೊಗಡು ಉಳಿದು ಕೊಂಡಿದೆ .

ಅಂದು ನಾವು ಚಿಕ್ಕ ಪುಟ್ಟ ಕೆಲ ವಸ್ತುಗಳನ್ನು ಕೊಂಡು ಕೊಂಡೆವು .  ಅಲ್ಲಿ ಶುದ್ದ ಹತ್ತಿಯ ಮೃದುವಾದ  ಬಟ್ಟೆಗಳು , ಬಾಟಿಕ್ ಮಾಡಿದ  ಬಟ್ಟೆಗಳು ಬಲು ಜನಪ್ರಿಯ .  ಹಾಗೆಯೇ ಚಾಕೊಲೆಟ್ ಕೂಡ !   ಬೆಲೆ ಕೂಡ ತೀರಾ ಹೆಚ್ಚಿಲ್ಲ !   ನಂತರ ನಮಗೆ ತಿಳಿದುಬಂದಂತೆ ,  ಲಂಕಾವಿಯಲ್ಲಿ  ಸದ್ಯಕ್ಕೆ ಎಲ್ಲವೂ  ' ಶುಲ್ಕ ಮುಕ್ತ"  (  Duty Free) ವಂತೆ . ಚಾಕೊಲೆಟ್ ನಿಂದ  ಕಾರ್ ವರೆಗೂ ! ಹೀಗಾಗಿ ಅಲ್ಲಿ ಎಲ್ಲವೂ ಕಡಿಮೆ  ಬೆಲೆ ಎನಿಸುತ್ತದೆ. ಇದೇ ಕಾರಣದಿಂದ  ಸಾಧಾರಣವಾಗಿ ಪ್ರತಿಯೊಬ್ಬರೂ ಸ್ವಂತ ವಾಹನ ಹೊಂದಿರುವುದರಿಂದ ,  ಅಲ್ಲಿ ಸಾರ್ವಜನಿಕ  ವಾಹನಗಳಿಲ್ಲ ! ಬಸ್ , ಟ್ರೈನ್  ಯಾವುದೂ ಇಲ್ಲ. ಟ್ಯಾಕ್ಸಿ ಗಳಿವೆ. ಅಷ್ಟೆ .ದ್ವಿಚಕ್ರ ವಾಹನಗಳು ಬಹಳವಾಗಿ ಕಾಣುತ್ತವೆಯಾದರೂ  ನಮ್ಮಲ್ಲಿನಂತೆ  ಮೋಟಾರ್ ಬೈಕ್ ಗಳಿಲ್ಲ !  ಎಂ -೮೦ ಯಂತೆಯೇ ಕಾಣುವ  ವಾಹನಗಳು ಹೆಚ್ಚು  . ಸ್ವಲ್ಪ ಮುಂಚೆ ನಮ್ಮಲ್ಲಿ  ಕೈನೆಟಿಕ್    k-4 ಮತ್ತು  ಹೀರೋ ಹೊಂಡಾ   ಸ್ಟ್ರೀಕ್ ಬಂದಿತ್ತಲ್ಲ  ಅಂಥಾ ಮಾಡೆಲ್ ಗಳೇ ಎಲ್ಲೆಲ್ಲೂ . ( ಸಿರಿಯ  ಪ್ರಕಾರ .. ಇಲ್ಲಿನ ಕೂಲೆಸ್ಟ್ ಬೈಕ್ ಅಂದ್ರೆ   M 80  ಯ ಹೊಸ  Version  ! )  ಹೆಚ್ಚಾಗಿ ಯಾಮಾಹ, ಹೊಂಡಾ , ಸುಜುಕಿ ಕಂಪನಿಗಳದ್ದು.  ದ್ವಿಚಕ್ರ ವಾಹನಗಳ ಮೇಲೆ ಇಬ್ಬರು ಮಾತ್ರ ಕುಳಿತುಕೊಳ್ಳ ಬಹುದು !  ಹೆಲ್ಮೆಟ್  ಕಡ್ಡಾಯ . ಇಬ್ಬರಿಗೂ !  ಯಾರೂ ಕೂಡ  ಅತಿ ವೇಗದಲ್ಲಿ ಓಡಿಸುವುದಿಲ್ಲ.  ರಸ್ತೆಗಳಲ್ಲಿ  ಲೇನ್ ಪದ್ಧತಿಯಿದ್ದು , ಅದನ್ನು ಎಲ್ಲರೂ ಪಾಲಿಸುತ್ತಾರೆ.  ೨೪ ಗಂಟೆಗಳೂ ಟ್ರಾಫಿಕ್ ದೀಪಗಳು ನಡೆಯುತ್ತಿದ್ದು , ರಸ್ತೆ ಖಾಲಿಯಿದ್ದಾಗ  ಕೂಡ  ಡ್ರೈವರ್ ಗಳು  ಹಸಿರು ದೀಪ ಹತ್ತುವ ವರೆಗೂ ಕಾಯುತ್ತಾರೆ. 

ಇವನ್ನೆಲ್ಲ ನೋಡುವಾಗ  ನಮ್ಮಲ್ಲಿಯ  ಟ್ರಾಫಿಕ್  ಶಿಸ್ತಿನ ಬಗ್ಗೆ  ಯೋಚಿಸಿ ಬೇಸರವಾಯಿತು . ನಾವು  ಕೆಂಪು ದೀಪ ಹಸಿರಾಗುವ ವರೆಗೆ ಕಾಯುತ್ತಾ ನಿಂತರೂ, ಹಿಂದಿನ ಯಾರಿಗೋ  ಮುಂದೆ ಹೋಗಲು ಬಹಳ ಅರ್ಜೆಂಟ್ ಆಗಿರುತ್ತದೆ . ಆತ  ಬ್ಯಾಟರಿ ಮುಗಿಯುವಷ್ಟು   ಹಾರ್ನ್  ಮಾಡುತ್ತಾನೆ . ಇವೆಲ್ಲ ನೆನಪಾಗಿ ಛೆ , ನಾವು ಯಾವಾಗ ಸುಧಾರಿಸುತ್ತೇವಪ್ಪಾ ಎನಿಸಿತು ! ಅಷ್ಟರಲ್ಲಾಗಲೇ ೮ ಗಂಟೆಯ ಹತ್ತಿರ ವಾದ್ದರಿಂದ ಊಟ ಮುಗಿಸುವುದು ಎಂದು ಕೊಂಡೆವು. ಸರಿ ಈಗ ಬೇರೆ ಏನು ಸಿಗುತ್ತದೆ ಎಂದು ನೋಡೋಣ  ಎಂದು ಹುಡುಕ ತೊಡಗಿದೆವು. ಚಿಕ್ಕ ಚಿಕ್ಕ  " ರೆಸ್ತೋರಾನ್ " ಗಳೇನೋ ಬೇಕಷ್ಟಿದ್ದವು ಆದರೆ ಎಲ್ಲಿಯೂ ಸಸ್ಯಾಹಾರ  ಇರಲಿಲ್ಲ ! ಒಂಥರಾ ಮಾಂಸಾಹಾರಿಗಳ ಸ್ವರ್ಗ ಎನ್ನ ಬಹುದು . ತಾಜಾ ಮೀನುಗಳು , ಏಡಿ, ಆಕ್ಟೋಪಸ್ ( !!)  , ಸ್ಕ್ವಿಡ್  ( ಒಂದು ಬಗೆಯ ಸಮುದ್ರ ಜೀವಿ) , ಮತ್ತೆ  ಕೋಳಿ,  ಹಂದಿ .. ಹೀಗೆ ಏನು ಬೇಕೋ ಅದು !!!  ರಸ್ತೆ ಪಕ್ಕದ ಹೋಟೆಲ್ ಗಳಲ್ಲಿ , ಜನ  ಕುಳಿತು ಆರಾಮಾಗಿ ಚಪ್ಪರಿಸುತ್ತಾ ತಿನ್ನುತ್ತಿದ್ದರು ! 

ಅಲೆ ಅಲೆದು ಸುಸ್ತಾಗಿ , ಅಲ್ಲೇ ಕಂಡ  'ಡೋಮಿನೋ  ಪಿಜ್ಜಾ ' ದ ಒಳ ಹೊಕ್ಕೆವು. ಅದು  ಬಹಳವೇನೂ ದೊಡ್ಡದಲ್ಲದಿದ್ದರೂ ,  ಚಂದವಾಗಿ ಅಲಂಕರಿಸಲ್ಪತ್ತು  ನೀಟಾಗಿತ್ತು . ಮನೆಯನ್ನೇ  ಸ್ವಲ್ಪ ಬದಲಾಯಿಸಿ, ಮುಂಭಾಗದಲ್ಲಿ  ಉತ್ಸಾಹದಿಂದ ಎದುರುಗೊಂಡ ಮಾಲೀಕ ನಮ್ಮನ್ನು ಒಂದು ಟೇಬಲ್ ನ ಮುಂದೆ ಕೂರಿಸಿದ. ನಾವು  ಕೇವಲ ವೆಜಿಟೇರಿಯನ್ ಎಂದಿದ್ದಕ್ಕೆ, ತಾನು ಅಂಥಾ ಪಿಜ್ಜ್ಯಾ  ಮಾಡಿ ಕೊಡುತ್ತೇನೆಂದ. ಸರಿ ನಾವೂ ಕುಳಿತೆವು. ಒಳಗೆ ಆತನ ತಾಯಿಯೋ ಯಾರೋ ಇರಬೇಕು .. ಪಿಜ್ಝಾ  ತಯಾರಿಸುತ್ತಿರುವುದು ನಮಗೆ ಕಾಣಿಸುತ್ತಿತ್ತು.  ಸ್ವಲ್ಪ ಹೊತ್ತಿನಲ್ಲಿ ಬಿಸಿ ಬಿಸಿ ಪಿಜ್ಝಾ ಬಂತು . ರುಚಿಯಾಗಿತ್ತು ಕೂಡ. ತಿಂದು ಕಾಫೀ ಕುಡಿದು  ಹೊರಟೆವು. 

ಮಧ್ಯಾಹ್ನದ ಊಟದ ಬಿಲ್ ಗೂ , ಈಗಿನ ಬಿಲ್ ಗೂ ಸಾಕಷ್ಟು ವ್ಯತ್ಯಾಸವಿತ್ತು ! ಮತ್ತೆ ಅಲ್ಲಿಂದ ಹೊರಟು ರಸ್ತೆಯಲ್ಲಿ ಅಲೆಯುತ್ತಾ  ಹೋಟೆಲ್ ನತ್ತ ಹೊರಟೆವು.  ಮರುದಿನ ಬೆಳಿಗ್ಗೆ  ನಮ್ಮ  ಏಜೆಂಟ್ ಬೇಗನೆ ಬರುವವನಿದ್ದ ಕಾರಣ  ಹೆಚ್ಚು ರಾತ್ರಿ ಮಾಡಿಕೊಳ್ಳದೆ  ರೂಮಿಗೆ ಬಂದೆವು. 

ಬೆಳಿಗ್ಗೆ ೬.೩೦ ಗೆಲ್ಲ ಎದ್ದು ಸ್ನಾನ ಮಾಡಿ ತಯಾರಾಗಿ, ಕೆಳಗೆ ತಿಂಡಿ ತಿನ್ನಲು ಬಂದೆವು .ನಮ್ಮ ಏಜೆಂಟ್ ಕೊಟ್ಟಿದ್ದ ಕೂಪನ್  ಅನ್ನು ಬ್ರೇಕ್ ಫಾಸ್ಟ್  ವಿಭಾಗದ  ಸುಂದರಿಗೆ ಕೊಟ್ಟು  ಒಳಹೊಕ್ಕೆವು.

ಹೆಚ್ಚಿನ ಹೋಟೆಲ್ ಗಳಲ್ಲಿ ಬೆಳಗಿನ ಉಪಹಾರ ವ್ಯವಸ್ಥೆ  ಉಚಿತವಾಗಿರುತ್ತದೆ.  ಬಫೆ  ಇದ್ದು ನಾನಾ ತರದ ತಿನಿಸುಗಳು ಇರುತ್ತವೆ. ಹೆಚ್ಚಾಗಿ , ವಿವಿಧ ಪ್ರಕಾರದ  ಬ್ರೆಡ್ ಗಳು , ಕತ್ತರಿಸಿಟ್ಟ ತಾಜಾ ಹಣ್ಣುಗಳು,  ಕಾರ್ನ್ ಫ್ಲೇಕ್ಸ್,  ಚಾಕೊಸ್ , ಗಂಜಿ , ನೂಡಲ್ಸ್ , ಆಮ್ಲೆಟ್ , ಬೇಯಿಸಿದ ಮೊಟ್ಟೆ ಇತ್ಯಾದಿ. ಚೀನಾ, ಥೈಲಾಂಡ್ , ಮಲೇಶಿಯಾ, ಸಿಂಗಾಪುರ್ , ಜಪಾನ್ ಇತ್ಯಾದಿ ದೇಶಗಳಲ್ಲಿ , ಅಕ್ಕಿಯ ಗಂಜಿ ಸಾಮಾನ್ಯವಾಗಿದ್ದು ಅದರ ಜೊತೆ ಸಾಧಾರಣವಾಗಿ  ಬೇರೆ ಬೇರೆ  ರೀತಿಯ  ಮೀನಿನ ಪುಡಿ, ಸೀಗಡಿ ಪುಡಿ ಇತ್ಯಾದಿಗಳನ್ನು ಹಾಕಿಕೊಂಡು ತಿನ್ನುತ್ತಾರೆ. ಗಂಜಿಯಲ್ಲಿ ಬೇರೆ ಏನೂ ಬೆರೆಸದ ಕಾರಣ ನಾವುಗಳು ಬೇಕಾದರೆ  ಬರೀ ಗಂಜಿ ಯನ್ನೂ  ತಿನ್ನ ಬಹುದು. ಇನ್ನು , ವಿವಿಧ ಬಗೆಯ ಮಾಂಸಾಹಾರದ ತಿಂಡಿಗಳೂ ಕೂಡ ಇದ್ದವು. ನಾವು ಬ್ರೆಡ್, ಕಾರ್ನ್ ಫ್ಲೇಕ್ಸ್, ಹಣ್ಣುಗಳು  ಇತ್ಯಾದಿಗಳಿಂದ ನಮ್ಮ  ಉಪಹಾರ ಮುಗಿಸಿದೆವು . ಕಾಫೀ, ಟೀ, ಹಾಲು  ಅಥವಾ ಜ್ಯೂಸ್ ಯಾವುದನ್ನೂ ಬೇಕಾದರೂ ಆಯ್ಕೆ ಮಾಡ ಬಹುದು. ಅಲ್ಲದೆ  ಅನಿರ್ಬಂಧಿತ ವಾಗಿದ್ದರಿಂದ , ಎಷ್ಟು ಬೇಕಾದರೂ ತಿನ್ನ ಬಹುದು , ಎಷ್ಟು ಬೇಕಾದರೂ ಕುಡಿಯಬಹುದು. ನಾವು ಸ್ವಲ್ಪ ಹೆಚ್ಚೆನಿಸುವಷ್ಟೇ ತಿಂದೆವು.  ಅಕಸ್ಮಾತ್ ಮಧ್ಯಾಹ್ನದ ಊಟಕ್ಕೆ ತಡವಾದರೂ  ಅಥವಾ ಸರಿಯಾಗಿ ಸಿಕ್ಕದೆ ಹೋದರೂ  ಜಾಸ್ತಿ ಹಸಿವೆನಿಸಬಾರದು ಎಂಬ ದೂ(ದು) ರಾಲೋಚನೆ !!!

ಹೇಳಿದ ಸಮಯಕ್ಕೆ ಸರಿಯಾಗಿ  ಕಾರು ಬಂತು. ಅಂದು  ನಮ್ಮ  ಕಾರ್ಯಕ್ರಮ ಬೆಳಗಿಂದ ಸಂಜೆ ೫.೩೦ ರವರೆಗೂ ಅದಾಗಲೇ  ಯೋಜಿಸಲಾಗಿತ್ತು.  ಮೊದಲು ಲಂಕಾವಿಯ  ಜನಪ್ರಿಯ  ಪ್ರವಾಸೀ ಆಕರ್ಷಣೆ  " Island Hopping "  ಹತ್ತಿರದ ಕೆಲವು ದ್ವೀಪಗಳಲಿಗೆ ಹೋಗಿ  ಅಲ್ಲಿನ ವಿಶೇಷತೆಯನ್ನು  ನೋಡುವುದು .ಅದಕ್ಕಾಗಿ  ಸ್ಪೀಡ್  ಬೋಟ್ ನಲ್ಲಿ ಪ್ರವಾಸಿಗಳನ್ನು ಕರೆದೊಯ್ಯುತ್ತಾರೆ . ಹೋಟೆಲ್ ನಿಂದ ಸುಮಾರು ೨೦ ನಿಮಿಷದ ದಾರಿ  ಈ ದೋಣಿ  ಕೇಂದ್ರಕ್ಕೆ . ಹೆಚ್ಚು ಅಲೆಗಳಿಲ್ಲದ ಸಮುದ್ರದಲ್ಲಿ  ಸ್ಪೀಡ್ ಬೋಟ್ ನಲ್ಲಿ ಹೋಗುವ  ಮಜಾವೇ ಬೇರೆ ! 

ಇಲ್ಲಿ ಸಮುದ್ರದ ಬಣ್ಣ ಹಸಿರು . ಆದರೆ ಸ್ವಚ್ಛ !  ಅಲೆಗಳಿಲ್ಲದ್ದರಿಂದ ಶಾಂತವಾಗಿ, ದೊಡ್ಡ  ಸರೋವರದಂತೆ ಕಂಡರೂ , ಬೋಟ್ ನಲ್ಲಿ ಹೋಗುವಾಗ ಮಾತ್ರ  ನಮ್ಮ ಹಳ್ಳಿ ರಸ್ತೆಗಳಲ್ಲಿ ೧೦೦ ಕಿ. ಮೀ. ವೇಗದಲ್ಲಿ ಹೋದರೆ ಹೇಗಾಗ ಬಹುದೋ ಅಂಥಾ ಅನುಭವ !!  ಚಿಕ್ಕ  ತೆರೆಗಳ ಮೇಲೂ , ದೋಣಿ ಅತೀ ವೇಗದಿಂದ ಹಾರುತ್ತಾ ಏರುತ್ತಾ  ಹೋಗುವಾಗ  ಒಂಥರಾ  bumpy ride  !!  ದೋಣಿಯಲ್ಲಿ ಕುಳಿತುಕೊಂಡ ಪ್ರತಿಯೊಬ್ಬರಿಗೂ  " life Jacket " ಕೊಡುತ್ತಾರೆ. ಎಲ್ಲರೂ ಅದನ್ನುಸರಿಯಾಗಿ  ಧರಿಸಿ  ಕುಳಿತ ಮೇಲೆಯೇ ದೋಣಿ ಹೊರಡುವುದು ! 
ದೋಣಿ ಕೇಂದ್ರ 


ನಮ್ಮ ಮೊದಲ  ತಾಣ  'Pulau Dayang Bunting '  ಅಥವಾ  ದಯಾಂಗ್ ಬಂಟಿಂಗ್ ದ್ವೀಪ . (Pulau  ಅಂದರೆ ದ್ವೀಪ ).   ಅಲ್ಲಿರುವ   Lake of Pregnant Maiden ಎಂಬ  ಸರೋವರ  ಹಾಗೂ  ಜಿಯೋ ಪಾರ್ಕ್ ! 


ಸ್ಪೀಡ್ ಬೋಟ್ ನ ಮೋಡಿ 



















ಅಲ್ಲಿಗೆ ಹೋಗುವಾಗ , ಸಮುದ್ರದಿಂದ ಮೇಲೆದ್ದು ನಿಂತ ಅದೆಷ್ಟೋ ಪುಟ್ಟ ದ್ವೀಪಗಳು  ದಟ್ಟ ಕಾಡಿನಿಂದ , ಸುಣ್ಣ ಕಲ್ಲಿನ ಶಿಖರಗಳಿಂದ ಮನಸೆಳೆಯುತ್ತವೆ . ಅವುಗಳನ್ನು ನೋಡುತ್ತಾ, ಓಹ್ ! ಆಹಾ ! ಏನು ಚಂದ ... ಇತ್ಯಾದಿ ಉದ್ಗಾರದೊಂದಿಗೆ  ಪ್ರಕೃತಿ ಸೌಂದರ್ಯ ನೋಡುತ್ತಾ ಮೈ ಮರೆತವರಿಗೆ  ದೋಣಿಯ ವೇಗ ಕಮ್ಮಿಯಾಗಿ  ನಿಲ್ಲುತ್ತಿದ್ದಾಗಲೇ  ಎಚ್ಚರ .




 ನಮ್ಮ ಜೊತೆ ದೋಣಿಯಲ್ಲಿ  ತಮ್ಮದೇ ಲೋಕದಲ್ಲಿ ವಿಹರಿಸುತ್ತಿದ್ದ ೩ ಹೊಸಾ ಜೋಡಿಗಳು  ಹಾಗೂ ಇನ್ನೊಂದು ಕುಟುಂಬವೂ ಬಂದಿತ್ತು. ಎಲ್ಲರೂ ಭಾರತೀಯರೇ !  
ಎಲ್ಲರೂ ಇಳಿದು  ದ್ವೀಪದ ಮೇಲೆ  ಕಾಲಿಟ್ಟೆವು.  ಹಿಂತಿರುಗಿದರೆ ವಿಶಾಲ ಸಮುದ್ರ , ಮುಂದೆ  ಹಸಿರು ತುಂಬಿದ ದ್ವೀಪ .. ಅತ್ತಿತ್ತ ಎತ್ತಲೂ ಹಸಿರು ಕಾಡಿನದೇ ಸಾಮ್ರಾಜ್ಯ !  ನೆಲಕ್ಕೆ ಕಾಲಿಟ್ಟ ನಮ್ಮನ್ನು  ಹಲವಾರು ಕಪಿ ಕುಟುಂಬಗಳು ಸ್ವಾಗತಿಸಿದವು.  ಮುಂದಿರುವ  ಮೆಟ್ಟಿಲುಗಳನ್ನೇರಿ ,  ಮತ್ತೆ ಕೆಲ ಮೆಟ್ಟಿಲುಗಳನ್ನು ಇಳಿದರೆ  ಸಿಗುವುದು  ದೊಡ್ಡ ಸರೋವರ . 

ದೂರದಿಂದ ನೋಡುವಾಗ  ಈ ಬೆಟ್ಟಗಳ ಸಾಲು . ಮಲಗಿರುವ ಬಸುರಿ ಹೆಂಗಸಿನಂತೆ ಕಾಣುತ್ತದೆ . 

ಮಲಗಿರುವ ಬಸುರಿಯಂತೆ ಕಾಣುವ ಬೆಟ್ಟ !



ಇಲ್ಲಿಯೂ ಕೂಡ  ಮೆಟ್ಟಿಲು ಶುರುವಾಗುವಲ್ಲಿಯೇ  ಸ್ವಚ್ಛತಾ ಗೃಹಗಳಿವೆ . ಅವುಗಳನ್ನು ನಿಸ್ಸಂಕೋಚವಾಗಿ ಉಪಯೋಗಿಸಬೇಕೆಂದೂ , ಹೊರಗೆಲ್ಲೂ ಹೊಲಸು ಮಾಡ ಬೇಡಿರೆಂದೂ  ಅಲ್ಲಿ ಬೋರ್ಡ್ ಕೂಡ ಹಾಕಲಾಗಿದೆ . ದಾರಿಯಲ್ಲಿಯೂ ಅಲ್ಲಲ್ಲಿ ದೊಡ್ಡ ಕಸದ ಬುಟ್ಟಿಗಳಿದ್ದು  ಪ್ರವಾಸಿಗಳೂ ಕೂಡ ಆಚೀಚೆ ಎಲ್ಲೂ ಕಸ ಚೆಲ್ಲುವುದಿಲ್ಲ ! 

 ಮುಂದೆ ಮೆಟ್ಟಿಲುಗಳನ್ನು ಇಳಿಯುತ್ತಿದ್ದಂತೆ ಕಂಡ  ಸುಂದರ ಸರೋವರದ ಬಳಿ ಆಗಲೇ ಬಹಳಷ್ಟು  ಪ್ರವಾಸಿಗಳಿದ್ದರು . ನೋಡುಗರಿಗೆ ಅನುಕೂಲವಾಗುವಂತೆ ಅಲ್ಲಲ್ಲಿ ಮರದ ಅಟ್ಟಣಿಗೆ ಕಟ್ಟಿದ್ದು , ನಾವುಗಳು ಅದರ ಮೇಲೆ ಓಡಾಡಲು, ಕುಳಿತುಕೊಳ್ಳಲು ಅನುಕೂಲವಾಗುತ್ತದೆ. ದೊಡ್ಡ ಸರೋವರ , ಹಸಿರು ಸ್ವಚ್ಛ ನೀರು .. ಸುತ್ತಲೂ ಎತ್ತರಕ್ಕೆ ಕಾಡು ತುಂಬಿದ ಬೆಟ್ಟಗಳು. ಒಂಥರಾ ಬಾಣಲೆ ಯಲ್ಲಿ ನೀರು  ತುಂಬಿ ಇಟ್ಟಂತೆ .  ಇದು ಪ್ರವಾಸೀ ತಾಣವಾದರೂ  ತಿಂಡಿ ತೀರ್ಥಗಳ ಅಂಗಡಿಗಳಿಲ್ಲ . ಹೆಚ್ಚೆಂದರೆ  ಕುಡಿಯುವ ನೀರಿನ ಚಿಕ್ಕ ಬಾಟಲಿಗಳು ಸಿಗಬಹುದು . ಒಂದು ಚಿಕ್ಕ ಮಾಹಿತಿ ಕೇಂದ್ರವಿದೆ , ಅಲ್ಲಿ ಈ ಜಾಗಕ್ಕೆ ಸಂಬಂಧಿಸಿದ ಮಾಹಿತಿಗಳು , ಕೊಂಡೊಯ್ಯಲು ಚಿಕ್ಕ ಪುಟ್ಟ  ನೆನಪಿನಕಾಣಿಕೆಗಳು  ಇತ್ಯಾದಿ ದೊರೆಯುತ್ತವೆ !  ಇಲ್ಲಿ ಸ್ವಚ್ಚತೆಯನ್ನು ಕಾದಿರಿಸಿಕೊಳ್ಳಲಾಗಿದೆ . ಇಲ್ಲಿ  ಬೋಟಿಂಗ್ , ಸ್ವಿಮ್ಮಿಂಗ್  ಕೂಡ ಇವೆ.


ಸರೋವರ 


ಹಾಂ, ಈ ಸರೋವರದ ಹೆಸರು  " Lake of Pregnant Maiden "   ಇದಕ್ಕೊಂದು  ಪುಟ್ಟ  ಕಥೆಯಿದೆ  . "ಮಾಮ್ಬಂಗ್ ಸರಿ "  ಎಂಬ ಒಬ್ಬ ಚಂದದ ರಾಜಕುಮಾರಿಯನ್ನು   " ಮಾತ್ ತೇಜಾ "  ಎಂಬ ಒಬ್ಬ ಯುವಕ ಪ್ರೀತಿಸಿದನಂತೆ .ಅವಳ  ಪ್ರೀತಿಯನ್ನು ಪಡೆಯಲು ತನ್ನ ಗುರುವಿನ ಸಲಹೆಯಂತೆ ಮತ್ಸ್ಯಕನ್ಯೆ ಯ ಕಣ್ಣೀರನ್ನು  ಅವಳ ಮುಖಕ್ಕೆ ಒರೆಸಿದನಂತೆ . ನಂತರ  ಅವರಿಬ್ಬರೂ ಮದುವೆಯಾದರು . ಅವರಿಬ್ಬರ ಪ್ರೇಮದ  ಪ್ರತೀಕವಾಗಿ ಹುಟ್ಟಿದ ಮಗು  ಒಂದು ವಾರದಲ್ಲೇ  ತೀರಿಕೊಂಡಿತಂತೆ . ಆ ಮಗುವನ್ನು ಇದೇ ಸರೋವರದಲ್ಲಿ  ಹೂಳಲಾಯ್ತಂತೆ . ಮಗುವನ್ನು ಕಳೆದುಕೊಂಡ ತಾಯಿ   ತನ್ನ ಉತ್ಕಟ ಮಮತೆಯಿಂದಾಗಿ   ಈ ಸರೋವರದ ನೀರಿಗೆ ಅದ್ಭುತ ಶಕ್ತಿ ಕೊಟ್ಟಳಂತೆ  . ಮಕ್ಕಳಾಗದ ಹೆಣ್ಣು  ಅಲ್ಲಿಯ ನೀರನ್ನು ಕುಡಿದರೆ / ಸ್ನಾನ ಮಾಡಿದರೆ   ಮಕ್ಕಳಾಗುತ್ತದಂತೆ . ಹೀಗೆ ಒಂದು ಕಥೆ . 

ಸರೋವರದ ಬಳಿ ಮಾಹಿತಿ ಕೇಂದ್ರ 
Add caption
ಇನ್ನೊಂದು ಕಥೆಯ ಪ್ರಕಾರ , ಒಬ್ಬ ಶಕ್ತಿ ಶಾಲಿ ರಾಜ ಈ ಸರೋವರದ ಬಳಿ ವಿಹಾರಕ್ಕೆ ಬಂದಿದ್ದ. ಅವನ ಪತ್ನಿಯೊಬ್ಬಳು  ಅಲ್ಲಿನ ನೀರನ್ನು ಕುಡಿದ ತಕ್ಷಣ  ಬಿರುಗಾಳಿ  ಬೀಸಿತಂತೆ , ಮಿಂಚು , ಸಿಡಿಲು  ಹೊಳೆದವಂತೆ. ಆ ಪತ್ನಿ ಗರ್ಭಿಣಿ ಆಗಿಬಿಟ್ಟಳಂತೆ ! ಹೀಗೆ ಅಸ್ವಾಭಾವಿಕವಾಗಿ ಗರ್ಭ ಧರಿಸಿದಳೆಂದು ಕೋಪಗೊಂಡ ರಾಜ , ಅವಳಿಗೆ ಶಿಕ್ಷೆಯಾಗಿ  ಅದೇ ಸರೋವರದ ಬಳಿ  ಬಿಟ್ಟು ಹೋದನಂತೆ . ಆಕೆ ಅಲ್ಲೇ ಒಂದು ಗಂಡು ಮಗುವನ್ನು ಹೆತ್ತಳಂತೆ . ಆ ಮಗು ಸ್ವಲ್ಪ ದೊಡ್ಡ ಆದಾಗ ಸರೋವರದಲ್ಲಿ ಬಿದ್ದು ಸತ್ತು ಹೋಯ್ತಂತೆ.ದುಃಖಗೊಂಡ  ತಾಯಿ .. ತನ್ನನ್ನು ತೆಗೆದುಕೊಂಡು ಮಗನನ್ನುಬದುಕಿಸು  ಎಂದು  ಸರೋವರವನ್ನು ಪ್ರಾರ್ಥಿಸಿದಳಂತೆ . ಆಗ  ಆಕೆ ಕಲ್ಲಾಗಿ , ಆಕೆಯ ಮಗ ಬಿಳಿ ಮೊಸಳೆಯಾಗಿ ಬಂದನಂತೆ . ಈಗಲೂ ಆ ಮೊಸಳೆ ಸರೋವರದಲ್ಲಿ ಇದೆ ಎಂದೂ .. ಕೇವಲ ಪರಿಶುದ್ಧ ಮನಸಿನವರಿಗೆ ಮಾತ್ರ ಕಾಣುತ್ತದೆ ಎಂದೂ ಹೇಳುತ್ತಾರೆ ! ( ನಮಗಂತೂ ಕಾಣಲಿಲ್ಲ !! ಹಿ ಹಿ ಹಿ ) 




ನೇತಾಡುವ ಕಲ್ಲು 






 


 

 ಆ ಸರೋವರದ ಸುಂದರ ಪರಿಸರದಲ್ಲಿ  ಅರ್ಧ ಗಂಟೆ ಕಳೆದಿದ್ದೆ ಗೊತ್ತಾಗಲಿಲ್ಲ . ಮತ್ತೆ ಅಲ್ಲಿಂದ ಹೊರಟು ನಮಗಾಗಿ ಕಾಯುತ್ತಿದ್ದ ದೋಣಿಯ ಬಳಿ ಬಂದೆವು . ಅಲ್ಲಿಂದ ಹೊರಡುವಾಗ  ಮಳೆ ಶುರುವಾಯಿತು . ಇಲ್ಲಿ ಯಾವಾಗ ಬೇಕಾದರೂ ಮಳೆ ಬರಬಹುದು . ಜೋರಾಗಿ ಸುರಿಯುವ ಮಳೆ ಕೆಲವೇ ನಿಮಿಷಗಳಲ್ಲಿ ನಿಂತು ಹೋಗುತ್ತದೆ . 
ಬೀಸುವ ಗಾಳಿಗೆ ಮುಖ ತೋಯಿಸುವ ಹನಿಯೂ,  ದೋಣಿಯ ವೇಗಕ್ಕೆ ಸಿಡಿಯುವ  ಸಮುದ್ರದ ನೀರೂ  ನಮ್ಮನ್ನು ಸಾಕಷ್ಟು ಒದ್ದೆ ಮಾಡಿದವು 


ದ್ವೀಪದಿಂದ ದೋಣಿಗೆ ....



ನಮ್ಮ ಮುಂದಿನ ತಾಣದಲ್ಲಿ ಲಂಕಾವಿಗೆ ಹೆಸರು ಕೊಟ್ಟ ಹದ್ದುಗಳನ್ನು ಭೇಟಿ ಮಾಡುವುದಿತ್ತು .  ಮ್ಯಾಂಗ್ರೂವ್ ಕಾಡಿನಿಂದ ಆವೃತವಾದ  ಒಂದು ಚಿಕ್ಕ ದ್ವೀಪ ಈ ಹದ್ದುಗಳ  ನೆಲೆಯಾಗಿದೆ.  ದೋಣಿಯಲ್ಲಿ ಅಲ್ಲಿ ಹೋಗಿ  ನಮ್ಮ ಕೈಯಾರೆ  ಈ ಹದ್ದುಗಳಿಗೆ ಮಾಂಸ ನೀಡ ಬಹುದು !  ಮ್ಯಾನ್ಗ್ರೂವ್  ಕಾಡಿನಲ್ಲಿ ಸ್ವಲ್ಪ ಹೊತ್ತು ಅಳೆದು ಬರಬಹುದು . ಮಾಂಸ ಎಂದರೆ ದೂರ ಓಡುವ ನಾವು ಹದ್ದುಗಳಿಗೆ  ತಿನ್ನಿಸುವ ಪ್ರಶ್ನೆಯೇ ಇರಲಿಲ್ಲ !  ಅಲ್ಲದೆ , ಮಳೆ ಬರುತ್ತಿದ್ದುದರಿಂದ  ಕಾಡೊಳಗೆ ಹೋಗುವ ಯೋಜನೆ ಕೂಡ  ಕ್ಯಾನ್ಸಲ್ ಆಯ್ತು. ದೋಣಿಯಲ್ಲೇ ಕುಳಿತು  ಸಲ್ಪ ಹೊತ್ತು ಹದ್ದುಗಳ ಹಾರಾಟ ನೋಡಿ ,  ಮುಂದಿನ ದ್ವೀಪಕ್ಕೆ ಹೊರಟೆವು . ...

ಮ್ಯಾಂಗ್ರೂವ್  ಮರಗಳ ಮೇಲೆ ಹದ್ದುಗಳು 

May 30, 2011

ಮನಸೆಳೆದ ಮಲೇಶಿಯಾ - ಭಾಗ -೧ ಸುಂದರ 'ಲಂಕಾವಿ'

ಮಗಳ ಪರೀಕ್ಷೆ ಗೂ ಮುಂಚೆ ಅವಳಿಗೆ ಪ್ರಾಮಿಸ್ ಮಾಡಿದ್ದೆ, ಈ ಸಲ  ಎಲ್ಲಾದರೂ ಹೊರಗೆ  ಟೂರ್ ಕರೆದುಕೊಂಡು ಹೋಗ್ತೀನಿ ಅಂತ. ೧೦ನೇ ಕ್ಲಾಸ್ ನ  ಟೆನ್ ಶನ್  ಮುಗಿದಿದ್ದಕ್ಕೆ  ರಿಲಾಕ್ಸ್ ಮಾಡಬೇಕಿತ್ತು. 

ಸರಿ ಎಲ್ಲಿಗೆ ಹೋಗೋದು ಅಂತ ಹುಡುಕಾಟ ಶುರುವಾಯ್ತು . ಜೊತೆಗೆ ಯಾರು ಬರುತ್ತಾರಾ ಎಂಬ  ಹತ್ತಿರದ ಸ್ನೇಹಿತರಲ್ಲಿ ವಿಚಾರಿಸುತ್ತಾ  ಪರೀಕ್ಷೆಯೂ ಮುಗೀತು. ಒಬ್ಬೊಬ್ಬರಿಗೂ  ತೊಂದರೆ ಆಗಿ ಕೊನೆಗೆ ನಾವು ಮಾತ್ರವೇ ಹೋಗುವುದು ಎಂದು ನಿರ್ಧಾರವಾಯ್ತು. ಆ ಗಳಿಗೆಯಲ್ಲಿ ನಾನೂ  ಬಾಲಿ , ಮಲೇಶಿಯಾ ಮತ್ತು ಮಾಲ್ಡೀವ್ಸ್ ಗಳ ಮಧ್ಯೆ ಯಾವುದು ಎಂಬ ಗೊಂದಲದಲ್ಲಿದ್ದೆ. ಜಪಾನ್ ನ ತ್ಸುನಾಮಿ , ಭೂಕಂಪ ಗಳ ನಂತರ , ಇಂಡೋನೆಶಿಯಾ ಸಣ್ಣ ಪ್ರಮಾಣದ ಭೂಕಂಪಗಳಾಗಿದ್ದರಿಂದ , ಸಿರಿ ಮೇಡಂ ಅವರು ಬಾಲಿಯನ್ನು  ಲಿಸ್ಟ್ ನಿಂದ ಹೊಡೆದು ಹಾಕಿದರು . ಮಾಲ್ಡೀವ್ಸ್ ನಲ್ಲಿ  ಬರೀ ಬೀಚ್ ಜಾಸ್ತಿ ಇರುವುದರಿಂದ ಎಷ್ಟೇ ಚಂದವಿದ್ದರೂ  ಒಂದು ವಾರ ಕಳೆಯುವಷ್ಟು ಏನಿಲ್ಲ ಎಂದಾಯಿತು . ಹೀಗಾಗಿ ಮಲೇಶಿಯಕ್ಕೆ ಹೋಗುವುದು ಎಂದು ನಿರ್ಧಾರವಾಯಿತು.  

ಮೇ ೧೦ರ ರಾತ್ರಿ ೧೨ಕ್ಕೆ ನಮ್ಮ ಮಲೇಷಿಯನ್ ಏರ ಲೈನ್ಸ್   ವಿಮಾನ  ಮುಂಬಯಿ ಬಿಟ್ಟಿತು.  ೪ ಗಂಟೆಗ ಳ ಪ್ರಯಾಣದ ನಂತರ ಕೌಲಾಲಂಪುರ್  ತಲುಪಿದಾಗ  ಅಲ್ಲಿನ  ಸಮಯ ಬೆಳಗಿನ ೭ ಗಂಟೆ . ಮಲೇಶಿಯಾ ನಮಗಿಂತ ೨.೩೦ ಗಂಟೆಗಳಷ್ಟು ಮುಂದಿದೆ. 
ಕೌಲಾಲಂಪುರದಿಂದ ನಮ್ಮ ಮೊದಲ  ತಾಣ " ಲಂಕಾವಿ"  ಗೆ  ನಮ್ಮ  ವಿಮಾನ   ೯.೩೦ ಕ್ಕೆ  . ಮೊದಲೇ ಬುಕ್ ಆದ ಕಾರಣ , ಲಗೇಜ್  ತಂತಾನೇ ಮುಂದಿನ ವಿಮಾನಕ್ಕೆ ಕಳುಹಿಸಲಾಗುತ್ತಿತ್ತು. ಹಾಗಾಗಿ , ನಾವು ನಮ್ಮ ಕೈಚೀಲಗಳನ್ನು ಮಾತ್ರ ತೆಗೆದು ಕೊಂಡು , ತಪಾಸಣೆ , ಇಮಿಗ್ರೇಶನ್  ಇತ್ಯಾದಿಗಳನ್ನು ಮುಗಿಸಿ  ಮುಂದಿನ ವಿಮಾನ ಏರಿದೆವು.  ಅಲ್ಲಿಂದ  ಲಂಕಾವಿಗೆ  ಒಂದು ಗಂಟೆಯ ಪ್ರಯಾಣ . 

ಲಂಕಾವಿ  :   
'ಲಂಕಾವಿ'  ಎಂದರೆ .. ಅಲ್ಲಿನ ಸ್ಥಳೀಯ ಭಾಷೆಯಲ್ಲಿ "  ಕಂದು ಕೆಂಪಿನ  ಹದ್ದು "  ಎಂದರ್ಥವಂತೆ ! ಅದಕ್ಕಾಗೇ , ಅಂಥಾ ಒಂದು ಹದ್ದಿನ ದೊಡ್ಡ ಪ್ರತಿಮೆಯನ್ನೂ  ಸ್ಥಾಪಿಸಿದ್ದಾರೆ . ಇದನ್ನು  "Icon of Langkawi "  ಎನ್ನುತ್ತಾರೆ . 
 ಲಂಕಾವಿ , ಮಲೇಷಿಯಾದಿಂದ ೩೦ ಕಿ.ಮೀ ಗಳ ಅಂತರದಲ್ಲಿದೆ.  " ಕೆಡಾಹ " ರಾಜ್ಯಕ್ಕೆ  ಸೇರಿದೆ .   ಇದು ಒಂದು ದ್ವೀಪ ಸಮೂಹ .ಇಲ್ಲಿ ಸುಮಾರು ೯೯ ಸಣ್ಣ ಸಣ್ಣ  ದ್ವೀಪಗಳಿವೆ   . ಹೆಚ್ಚಿನ ದ್ವೀಪಗಳಲ್ಲಿ ದಟ್ಟ  ಕಾಡಿದ್ದು   ಜನವಸತಿಯಿಲ್ಲ. 

ವಿಮಾನದಿಂದ ಬೆಳ ಬೆಳಿಗ್ಗೆ   ಸಮುದ್ರದ ಮೇಲೆ  ಆಡುವ ಸೂರ್ಯನ ಕಿರಣಗಳನ್ನು ನೋಡುವಾಗಲೇ ಒಂದು ಹಿತವಾದ ಅನುಭವ ! ಕೆಳಗೆ ದ್ವೀಪಗಳಲ್ಲಿ  ನದಿಗಳು ಸಮುದ್ರಕ್ಕೆ ಸೇರುವಲ್ಲಿ  ನದೀಪಾತ್ರದ ಮೇಲೆ  ಕಿರಣಗಳು   ಹೊಳೆದು ಕನ್ನಡಿಯಂತೆ ಥಳಥಳಿಸುವುದನ್ನು  ವಿಮಾನದ ಕಿಡಕಿಯಿಂದ  ಬೆರಗುಗಣ್ನಿಂದ  ನೋಡುತ್ತಾ ಕುಳಿತೆವು. 

ಬಳುಕುವ ಕನ್ನಡಿ ? 

 ವಿಮಾನ ಕೆಳಗಿಳಿಯಿತು . ಹೊರಗೆ ಬಂದು ನೋಡಿದರೆ , ದಟ್ಟ ಹಸಿರು ಹೊದ್ದ ಬೆಟ್ಟಗಳು , ಭತ್ತದ ಗದ್ದೆ  , ಹಸಿರು ಬಯಲು, ತೆಂಗಿನ ತೋಟಗಳ ನಡುವೆ ಒಂದು  ಪುಟ್ಟ ವಿಮಾನ ನಿಲ್ದಾಣ  ! ಸುವ್ಯವಸ್ಥಿತ , ಸ್ವಚ್ಛ ,ಹೆಚ್ಚಿನ ಯಾವುದೇ  ಗೊಂದಲ , ಗಲಾಟೆಯಿಲ್ಲ !  ವಿಮಾನದಿಂದ ಕೆಳಗಿಳಿದು ಹತ್ತೇ ನಿಮಿಷಗಳಲ್ಲಿ ನಾವು ನಿಲ್ದಾಣ ದಿಂದ  ಹೊರಗೆ ಬಂದಿದ್ದೆವು. ನಮಗಾಗಿ ಕಾಯುತ್ತಿದ್ದ ಕಾರಿನಲ್ಲಿ ಹೋಟೆಲ್ ನತ್ತ ಪ್ರಯಾಣ ಬೆಳೆಸಿದೆವು. 


ರನ್  ವೇ ಯ ಪಕ್ಕದಲ್ಲಿರುವ ಮನೆ , ತೋಟ 


ವಿಮಾನ ನಿಲ್ದಾಣದಿಂದ ನಮ್ಮ ಹೋಟೆಲ್ ಇದ್ದ  " ಕುಆಹ್ " ಪ್ರದೇಶಕ್ಕೆ  ಹೋಗುವಾಗ ದಾರಿಯುದ್ದಲ್ಕ್ಕೂ ಚಿಕ್ಕ ಚಿಕ್ಕ ಹಳ್ಳಿಗಳು. ಥೇಟ್ ನಮ್ಮ ಹಳ್ಳಿಗಳ ತರದ್ದೇ  ಹೆಂಚಿನ ಮನೆಗಳು . ಗದ್ದೆಗಳು, ತೋಟಗಳು .ಆದರೆ , ಎಲ್ಲೂ , ಕಸ ,ಕೊಳಚೆ, ಗಟಾರಗಳು ಕಾಣಲಿಲ್ಲ . ಎಲ್ಲಿಯೂ , ದನ , ಕುದುರೆ , ನಾಯಿಗಳು  ರಸ್ತೆಯಲ್ಲಿ ಕಾಣಲಿಲ್ಲ . ಹೊಟ್ಟೆಯಲ್ಲಿನ  ನೀರು ಕುಲುಕದಷ್ಟು  ಚಂದದ  ರಸ್ತೆಗಳು.ಎಲ್ಲಿ ನೋಡಿದರೂ ಹಸಿರು ಬೆಟ್ಟಗಳು  . ಮಂಜು ಕವಿದ ದಟ್ಟಕಾಡುಗಳು . ನಾನಾಗಲೇ  ಆ ಸುಂದರ ಪ್ರಕೃತಿಯಲ್ಲಿಕಳೆದು ಹೋಗಿದ್ದೆ ! 

ನಮ್ಮ ಕಾರು , " ಬೇ ವ್ಯೂ " ಹೋಟೆಲ್ ನ ಎದುರು ನಿಂತಿತು . ರಿಸೆಪ್ಶನ್  ನಲ್ಲಿ  ಕೀ ತೆಗೆದುಕೊಂಡು   ನಮಗಾಗಿ ಕಾದಿರಿಸಿದ ರೂಮಿಗೆ ಬಂದೆವು .೧೪ ನೆ ಅಂತಸ್ತಿನಲ್ಲಿನ ನಮ್ಮ ರೂಮಿನ ಕಿಡಕಿ ಪರದೆ ಸರಿಸಿದಾಗ ಎದುರಿಗೆ  ಸುಂದರ ನೋಟ  !  ವಿಶಾಲ ಸಮುದ್ರ , ಅಲ್ಲಲ್ಲಿ ಕಾಣುವ ದೋಣಿಗಳು , ಸ್ಪೀಡ್ ಬೋಟ್ ಗಳು  ,  ಸಮುದ್ರದ ನಡು ನಡುವೆ  ದೂರದಲ್ಲಿ ಕಾಣುವ ದ್ವೀಪಗಳು !!!
ಅಷ್ಟೆ ಅಲ್ಲ, ೮ ನೆ ಅಂತಸ್ತಿನಲ್ಲಿರುವ  ಹೋಟೆಲ್ ನ  ಈಜುಕೊಳ ಕೂಡ !! ಸುಸ್ತಾಗಿದ್ದರಿಂದ  ಸ್ವಲ್ಪ ಕೈ ಕಾಲು ಮುಖ ತೊಳೆದು ಹಾಸಿಗೆ ಯ ಮೇಲೆ ಉರುಳಿದವರಿಗೆ ಎಚ್ಚರವಾಗಿದ್ದು ಸುಮಾರು  ೨ ಗಂಟೆಗಳ ನಂತರ !!

ನಮ್ಮ ರೂಮಿನ ಕಿಟಕಿಯಿಂದ.....

ಹೊಟ್ಟೆ ಚುರುಗುಟ್ಟುತ್ತಿತ್ತು. ಊಟಕ್ಕೆ ಹೋಟೆಲ್ ಹುಡುಕ ಬೇಕಿತ್ತು . ಕೆಳಗೆ  ರಿಸೆಪ್ಶನ್ ನಲ್ಲಿ ವಿಚಾರಿಸಿದಾಗ  ಅಲ್ಲಿನ ಸುಂದರಿ ,  ಹತ್ತಿರದಲ್ಲೇ  ಒಂದು ಚಿಕ್ಕ  ಇಂಡಿಯನ್ ಹೋಟೆಲ್ ಇರುವುದೆಂದೂ , ಆದರೆ  ವೆಜಿಟೇರಿಯನ್  ಸಿಗುವುದೋ ಇಲ್ಲವೋ ಗೊತ್ತಿಲ್ಲ ಎಂದಳು ! ಸರಿ ನೋಡೋಣ ಎಂದು  ಆ ಹೋಟೆಲ್ ಅನ್ನು ಹುಡುಕುತ್ತ ಹೋದೆವು . ಕೇವಲ ೫ ನಿಮಿಷಗಳಲ್ಲಿ ನಾವು ಆ ಪುಟ್ಟ ಹೋಟೆಲ್ ನ ಎದುರಿಗಿದ್ದೆವು .  ಅಲ್ಲಿ ವಿಚಾರಿಸಿದಾಗ . ವೆಜಿಟೇರಿಯನ್  ಊಟ ತಿಂಡಿಗಳು ಇವೆ ಎಂದು  ತಿಳಿದು ಸಮಾಧಾನದ ಉಸಿರು ಬಿಟ್ಟೆವು.  ಆರ್ಡರ್ ಮಾಡುವ ಮೊದಲು ಅವರಲ್ಲಿ  " ಕ್ರೆಡಿಟ್  ಕಾರ್ಡ್" ಸ್ವೀಕರಿಸುವರೆ ಎಂದು ಕೇಳಿದ್ದಾಯಿತು .  ನಾವು ಇನ್ನೂ ಮಲೇಷಿಯನ್  ಹಣವಾದ  ರಿಂಗಿಟ್  ಅನ್ನು ಕೊಂಡಿರಲಿಲ್ಲ. ಅಮೇರಿಕನ್ ಡಾಲರ್ ಇದ್ದಿತ್ತಾದರೂ  ಆ ಹೋಟೆಲ್ ನಲ್ಲಿ ನಡೆಯುವುದೇ ಎಂದು ಗೊತ್ತಿರಲಿಲ್ಲ . ಹೋಟೆಲ್ ನಾತ ,   " ಕ್ರೆಡಿಟ್  ಕಾರ್ಡ್"  ಸ್ವೀಕರಿಸುವುದಿಲ್ಲ ಎಂದೂ , ಆದರೆ , ಅವನಲ್ಲಿಯೇ   ಡಾಲರ್ ಗಳನ್ನು ಮಲೇಷಿಯನ್  ರಿಂಗಿಟ್  ಗೆ ಬದಲಾಯಿಸಿಕೊಳ್ಳಬಹುದು ಎಂದು ಹೇಳಿ ನಮ್ಮ ಟೆನ್ ಶನ್ ಅನ್ನು ಕಮ್ಮಿ ಮಾಡಿದ. ನಾವು ನೆಮ್ಮದಿಯಿಂದ  ರೋಟಿ , ದಾಲ್ ಹಾಗೂ  ದೋಸೆ ತಿಂದೆವು . ಅಲ್ಲಿಯ  " ರೋಟಿ ಚನೈ"  ಎಂಬ  ರೋಟಿ ಬಹಳವೇ ರುಚಿಯಾಗಿತ್ತು !  ೩ ಜನ ಹೊಟ್ಟೆ ತುಂಬಾ ಊಟ ಮಾಡಿದ ಮೇಲೆ  ಬಿಲ್ ಬಂತು  . ಕೇವಲ ೧೨ ರಿಂಗಿಟ್ ಗಳು !!!  ನಾವಂತೂ ಫುಲ್ ಖುಷ್ !  ಆ ನಂತರ  ಅಲ್ಲೇ ಆಚೀಚೆ  ನೋಡಲು ಹೊರಟೆವು . 

ಇಲ್ಲಿ  ಅಷ್ಟಷ್ಟು ದೂರಕ್ಕೂ  " ವಿದೇಶೀ ಹಣ ವಿನಿಮಯ  ಕೇಂದ್ರ " ಗಳು ಕಾಣ ಸಿಗುತ್ತವೆ.  ನಮ್ಮಲ್ಲಿ  " ಪಾನ್ ಅಂಗಡಿ" ಗಳಂತೆ ! ಒಂದು ರಿಂಗಿಟ್  ಗೆ ಸುಮಾರು ೧೫ - ೧೬ ರೂಪಾಯಿಗಳು !  ಒಂದು ಡಾಲರ್ ಗೆ  ೩  ರಿಂಗಿಟ್ ಗಳು . 

ಹೆಚ್ಚು ರಶ್ ಇಲ್ಲದ  ಶಾಂತವಾದ  ಜಾಗ. ಅಗಲ ರಸ್ತೆಗಳು . ಅಗಲವಾದ ಫೂಟ್ ಪಾತ್ ಗಳು. ಫೂಟ್ ಪಾತ್ ನಲ್ಲಿ ಆಲ್ಲಲ್ಲಿ  ಲೈಟ್ ಕಂಬಗಳ ಕೆಳಗೆ ಸಿಮೆಂಟಿನ  ಟೇಬಲ್   ತರ ಚಿಕ್ಕದಾಗಿ  ಕಟ್ಟಿ ಇಟ್ಟಿದ್ದಾರೆ.  ಅಂಗಡಿಗಳಲ್ಲಿ ಕೆಲಸ ಮಾಡುವವರು , ಬೇರೆಯವರು ,ಆ ಟೇಬಲ್ ಗಳನ್ನು ಊಟಕ್ಕೆ ಬಳಸುತ್ತಾರೆ . ಪಕ್ಕಕ್ಕೆ   ಕಸದ ಡಬ್ಬಿಗಳನ್ನೂ ಇಡಲಾಗಿದೆ. ಅವೂ ಸಹ  ಕಸದ ಡಬ್ಬಿ  ಎಂದು ಅನಿಸದಷ್ಟು ಸ್ವಚ್ಚವಾಗಿವೆ !  ಸಾಧಾರಣವಾಗಿ ಹೆಂಗಸರು  ಅಂಗಡಿಗಳ ಒಳಗೆ ಕುಳಿತು ಊಟ ಮಾಡಿದರೆ,  ಗಂಡಸರು ಮಾತ್ರ ಹೊರಗಿನ ಟೇಬಲ್ ಬಳಸುತ್ತಾರೆ. 

ಬಣ್ಣ ಬಣ್ಣದ ಬಟ್ಟೆಗಳು  ಚಿಕ್ಕ ಚಿಕ್ಕ ಅಂಗಡಿಗಳಲ್ಲಿ  ಪ್ರದರ್ಶಿತವಾಗಿದ್ದವು. ಥೇಟ್ ನಮ್ಮಲ್ಲಿಯನ್ತೆಯೇ .  ಎಲ್ಲಾ ಕಡೆಯೂ ಒಂಥರಾ ಸೇಲ್  ಇರುವಂತೆ ನಮಗನಿಸುತ್ತಿತ್ತು. 
ಸಾಧಾರಣವಾಗಿ ಎಲ್ಲರಿಗೂ ಇಂಗ್ಲಿಷ್  ತಕ್ಕಮಟ್ಟಿಗೆ ಬರುವುದರಿಂದ .. ವ್ಯವಹಾರದಲ್ಲಿ ತೊಂದರೆಯಾಗದು . ಅಂದು ನಮಗೆ ಬೇರೆ ಏನೂ ಪ್ರೋಗ್ರಾಮ್ ಇಲ್ಲದ್ದರಿಂದ  ಸ್ವಲ್ಪ ಹೊತ್ತು ಹೀಗೇ ಎಲ್ಲಾ ನೋಡಿಕೊಂಡು ರೂಮಿಗೆ ಹೋಗುವುದು ಮತ್ತೆ ಸಂಜೆ  ನಂತರ  ಏನಾದರೂ ಖರೀದಿ ಮಾಡುವುದು ಎಂದು  ನಿರ್ಧರಿಸಿ  ಹೋಟೆಲ್ ಗೆ ಮರಳಿದೆವು . 
   
  



  

May 2, 2011

सच्चाई



कुछ  एहसास होते ऐसे हैं..
महसूस  करे तो  क़यामत  आ जाए !
कुछ  ज़ज़बात  होती ऐसी  हैं ,
ज़ुबान पे आये तो ज़िंदगी बदल जाए I 
प्यार कर के भी रहते हैं दूर तुम से ,
बतादे  अगर तो ज़माना हिल जाए I
दिल में छुपा के  जी रहे हैं यादों को 
उन्ही के सहारे  ये ज़िंदगी ढल जाए I

ಹಿಂದಿಯಲ್ಲಿ ಓದಲು ಕಷ್ಟ ಎನಿಸಿದರೆ .... 

(ಕುಚ್  ಎಹಸಾಸ್  ಹೋತೇ ಐಸೆ ಹೈನ್ 
ಮಹಸೂಸ್ ಕರೆ ತೋ ಕಯಾಮತ್  ಆ ಜಾಯೆ ! 
ಕುಚ್ಚ್ ಜಜಬಾತ್ ಹೋತೀ   ಐಸೀ  ಹೈನ್ 
ಜುಬಾನ್  ಪೆ ಆಯೇ  ತೋ ಜಿಂದಗೀ ಬದಲ್ ಜಾಯೆ 
ಪ್ಯಾರ್ ಕರ್ ಕೆ ಭೀ ರಹತೇ ಹೈನ್ ದೂರ್  ತುಮ  ಸೆ 
ಬತಾಯೇ ಅಗರ  ತೋ ಜಮಾನಾ ಹಿಲ್ ಜಾಯೆ 
ದಿಲ್ ಮೇ ಚುಪಾ ಕೆ  ಜೀ ರಹೇ ಹೈನ್ ಯಾದೊನ್ ಕೋ 
ಉನ್ ಹೀ ಕೆ ಸಹಾರೆ  ಯೇ  ಜಿಂದಗೀ  ಡ್ಹಲ್  ಜಾಯೆ !   )


ಕೆಲವರಿಗೆ  ಕವಿತೆಯ ಕನ್ನಡ ಅನುವಾದ ಬೇಕಿತ್ತು.  ಇಲ್ಲಿದೆ  ನೋಡಿ .


ಕೆಲ ಭಾವಗಳೇ ಒಂಥರಾ
ಅನುಭವಿಸಿದರೆ ಪ್ರಳಯವೆ ಆಗುವುದು
ಕೆಲ ಭಾವುಕತೆಯ ಪರಿಯೇ ಬೇರೆ
ಹೇಳಿಕೊಂಡರೆ  ಜೀವನವೆ  ಬದಲಾಗುವುದು
ಪ್ರೀತಿಸಿಯೂ  ನಿನ್ನಿಂದ ದೂರವಿರುವೆನು ನಾನು
ತೋರಿಸಿಕೊಂಡರೆ  ಜಗವೇ  ಬೆಚ್ಚುವುದು !
ಹುದುಗಿಹುದು ಮನದಲ್ಲಿ ಕಳೆದ ದಿನಗಳ ನೆನಪು  
ಅವುಗಳಾಸರೆಯಲ್ಲಿ ಕಳೆದು ಹೋಗಲಿ ಬದುಕು 

(ನನ್ನ ಅಭಿಪ್ರಾಯ -  ಕೆಲ  ಶಬ್ದಗಳನ್ನು ಅದೇ ಅರ್ಥದಲ್ಲಿ ಅನುವಾದಿಸುವುದು  ಸಲ್ಪ ಕಷ್ಟವಾಗಿ ಬಿಡುತ್ತದೆ.  ಹೊಂದಿಕೊಳ್ಳಬಹುದು ಎಂಬರ್ಥದ ಶಬ್ದಗಳನ್ನು ಬಳಸಿದಾಗ ..  ಕವಿತೆಯ  ಸ್ವಾದ ವೆ ಸಲ್ಪ ಕಮ್ಮಿಯಾಗುತ್ತದೆ . ಹೇಗಿದ್ದರೂ ಸಲ್ಪ ಅಡ್ಜಸ್ಟ್ ಮಾಡಿಕೊಳ್ತೀರಲ್ಲ ? )

March 15, 2011

ಕಿವಿಮಾತು


ಸದಾ ಅವಳ  ಜೊತೆಯಾಗಿರುವಾಸೆ ಗೆಳೆಯಾ 
ಏನು ಮಾಡಲಿ ಹೇಳು ಉಪಾಯ ?
ಜಡೆಯ ಮಲ್ಲಿಗೆಯಾಗಲೆ?
ದುಂಡು ಕೈಗಳ ಬಳೆಯಾಗಲೇ?
ಕಾಲ ಮುತ್ತಿಡುವ  ಗೆಜ್ಜೆಯಾಗಲೇ?
ನುಣುಪುಗೊರಳಿನ  ಸರವಾಗಲೇ?
ಬಡಬಡಿಸಿದ ಪ್ರೇಮಿ .
 
ಅದನು ಕೇಳಿದ ಗೆಳೆಯನೆಂದ
ಯಾವ ಕಾಲದಲ್ಲಿರುವೆ ನೀನಿನ್ನೂ ?
ಬಳೆ , ಕಾಲ್ಗೆಜ್ಜೆ , ಚಿನ್ನದ ಚೈನ್
ಇವೆಲ್ಲಾ ಈಗ ಹಳೆ ಫ್ಯಾಶನ್
ಜಡೆಯೇ ಇಲ್ಲದ ಮೇಲೆ ಮಲ್ಲಿಗೆಯೆಲ್ಲಿ  ?
ಇಂಥಾ ಯೋಚನೆ ಯಾಕೋ  ನಿನ್ನ ತಲೆಯಲ್ಲಿ ? 
 
ಸದಾ ಅವಳ 
ಕಿವಿಗೆ ಕಚಗುಳಿಯಿಟ್ಟು
ಮೃದು ಕೆನ್ನೆಯ ಸವರಿ
ತುಟಿಯ ಮುದ್ದಿಸುವ ಆಸೆಯಿದ್ದರೆ
ಓ ಗೆಳೆಯಾ ಕೇಳು
ಬೇರೇನೂ ಬೇಡ ಆಗು
 ಅವಳ ಕೈಯ ಮೊಬೈಲು !!


February 27, 2011

ಮುಗಿಯಿತು ಮೂರು ......


 ಬ್ಲಾಗ್ ಹುಟ್ಟಿ ಮೂರುವರ್ಷಗಳು ಕಳೆದವು ! ಖುಷಿಯೂ ಇದೆ ..... ಬೇಸರವೂ 

ಹೊಸ ಲೋಕಕ್ಕೆ  , ತೆರೆದು ಕೊಂಡಿದ್ದಕ್ಕೆ,  ಹೊಸ ಸ್ನೇಹಿತರ ಬಳಗ ಸಿಕ್ಕಿದ್ದಕ್ಕೆ  ನನ್ನ ಮನದಲ್ಲಿ ಕೊರೆಯುವ ಭಾವಗಳನ್ನು ಅಭಿವ್ಯಕ್ತಿಸಲು  ಅವಕಾಶ ಸಿಕ್ಕಿದ್ದಕ್ಕೆ ಖುಷಿ !
ಅಂದುಕೊಂಡಷ್ಟು ಬರೆಯಲಾಗದ್ದಕ್ಕೆ , ಬರೆದಿದ್ದೂ ಕೂಡ  ತೃಪ್ತಿಯಾಗದ್ದಕ್ಕೆ .. ಬೇಸರ . 

ಶುರು ಶುರುವಿನಲ್ಲಿ , ಒಂದು ಬರಹ  ಮುಗಿಯುತ್ತಿದ್ದಂತೆ ಮುಂದಿನ ಬರಹದ  ಮೊಳಕೆ ಹುಟ್ಟಿರುತ್ತಿತ್ತು . ಪ್ರತಿ ಅಭಿಪ್ರಾಯಗಳನ್ನು ಓದುವಾಗ  ಇನ್ನಷ್ಟು ಚಂದ ಬರೆಯುವ ಹುರುಪು ಮೂಡುತ್ತಿತ್ತು.  ಇವತ್ತೇನು ಬರೆಯಲಿ ಎಂಬ  ಯೋಚನೆ ತಲೆಯಲ್ಲಿ ಕೊರೆಯುತ್ತಿತ್ತು . ಆಗ  ನೂರಾರು ವಿಷಯಗಳು ಹರಿದಾಡುತ್ತಿದ್ದು ಯಾವುದನ್ನು ಶಬ್ದ ರೂಪಕ್ಕೆ ತರಲಿ ಎಂದು  ಯೋಚಿಸುತ್ತಿದ್ದೆ !  

ಈಗಲೂ "ಇವತ್ತೇನು ಬರೆಯಲಿ ? "ಎಂಬ ಯೋಚನೆ ಕೊರೆಯುತ್ತದೆ  ಆದರೆ , ಬೇರೆ ರೀತಿಯಲ್ಲಿ . ವಿಷಯಗಳೇ ಹೊಳೆಯದಾಗುತ್ತವೆ ಎಷ್ಟೋ ಸಲ. ಹೊಳೆದರೂ ಬರಹವಾಗಿಸಲು  ತಿಣುಕಾಡಬೇಕಾಗುತ್ತಿದೆ . ಯಾಕೆನ್ನುವುದು ನನಗೂ ಗೊತ್ತಿಲ್ಲ. ಹೀಗಾಗಿ  ಬ್ಲಾಗ್ ಅಪ್ ಡೇಟ್   ಆಗಲು ಬಹಳ ಸಮಯ ತೆಗೆದುಕೊಳ್ಳುತ್ತಿದೆ. ಇದನ್ನು ನಿಮ್ಮೆದುರು ಪ್ರಾಮಾಣಿಕವಾಗಿ  ಹೇಳಿಕೊಳ್ಳುತ್ತೇನೆ. ಹೆಚ್ಚೆಚ್ಚು ಬರೆಯಲಾಗದ ಬಗ್ಗೆ ನನಗೂ ಬೇಸರವಾಗುತ್ತಿದೆ.  

ಹೀಗಿದ್ದಾಗಲೂ , ನೀವು ಬರೆಯಲು ಪ್ರೋತ್ಸಾಹಿಸುತ್ತೀರಿ , ತೇಜಸ್ವಿನಿ  ,ಪ್ರಕಾಶಣ್ಣ  ಯಾಕೆ ಬರೆಯುತ್ತಿಲ್ಲ ಎಂದು ಪ್ರಶ್ನಿಸಿದರೆ  , ಸುಧೇಶ್( ಅನುಭೂತಿ) , ಗುರುಮೂರ್ತಿ ( ಸಾಗರದಾಚೆಯ  ಇಂಚರ)  " ಅಮಾವಾಸ್ಯೆ - ಹುಣ್ಣಿಮೆಗಾದರೂ ಒಂದು ಬರಹ ಹಾಕಿ ಎಂದು ರೇಗಿಸುತ್ತಾರೆ .  ಇನ್ನು ಆಜಾದ್ ಭಾಯಿ ಅಂತೂ  " ನೀನು ಬರೆಯಲಿಲ್ಲ ಅಂದ್ರೆ , ನಾನೇ ಬರೆದು ನಿನ್ನ ಬ್ಲಾಗ್ ನಲ್ಲಿ ಹಾಕುತ್ತೀನಿ " ಎಂಬ ಪ್ರೀತಿಯ ಬೆದರಿಕೆ ಹಾಕುತ್ತಾರೆ !  ಹಾಗಿದ್ದರೂ ಕೆಲವೊಮ್ಮೆ ಅಕ್ಷರಗಳೇ ಮೂಡುವುದಿಲ್ಲ .

ಹೀಗೆ ಕುಂಟುತ್ತ ಕುಂಟುತ್ತಾ  ಅಂತೂ ೩ ವರ್ಷಗಳ ಹಾದಿ  ಕಳೆಯಿತು .  ಇನ್ನಾದರೂ ಸ್ವಲ್ಪ  ಜಾಸ್ತಿ ಬರೆಯುತ್ತೇನೆ  ಎಂದು ಹೇಳಿದರೆ , ರಾಜಕಾರಣಿಗಳ ಆಶ್ವಾಸನೆ ಆಗಿಬಿಡುತ್ತದೆ .  ಹೀಗಾಗಿ ಆ ಮಾತು ಹೇಳುವುದಿಲ್ಲ.  ಆದರೆ , ಹೊಳೆಯಲ್ಲಿ ಸ್ವಲ್ಪವಾದರೂ ನೀರು ಹರಿಯುತ್ತಿರುವಂತೆ ನೋಡಿಕೊಳ್ಳುತ್ತೇನೆ ಎಂದು ಮಾತ್ರ ಹೇಳಬಲ್ಲೆ. 
ನಿಮ್ಮ  ಪ್ರೀತಿ , ವಿಶ್ವಾಸ , ಪ್ರೋತ್ಸಾಹಗಳು ನನ್ನೊಡನೆ ಇರಲಿ . ಬರೆಯಲು ಸ್ಫೂರ್ತಿ ಕೊಡುತ್ತಿರಲಿ ಎಂಬ ಕಳಕಳಿಯ ಪ್ರಾರ್ಥನೆಯೊಂದಿಗೆ  ಹುಟ್ಟುಹಬ್ಬಕ್ಕೆ  ಆಮಂತ್ರಿಸುವೆ.

.